

ಮದ್ದೂರು: ಬ್ಯಾಗ್ನಲ್ಲಿ 10 ಲಕ್ಷ ರೂಪಾಯಿ ಇದೆ. ನಾವಿನ್ನು ಹೊರಡುತ್ತೇವೆ, ಹೊರಗೆ ಹೋಗಿ ಹಣ ಎಣಿಸಿಕೊಳ್ಳಿ ಎಂದವರ ಮಾತು ನಂಬಿ ಕಾರಿಂದ ಕೆಳಗೆ ಇಳಿದಾಗ ಕಾದಿತ್ತು ಶಾಕ್. ಹಣ ಇದೆ ಎನ್ನಲಾದ ಬ್ಯಾಗ್ನಲ್ಲಿ ಕೆಳಗಡೆ ನೋಟ್ ಬುಕ್ಗಳನ್ನು ತುಂಬಿ ಮೇಲೆ ಮಾತ್ರ 100, 200, 500 ರೂಪಾಯಿ ಮುಖಬೆಲೆಯ ಅಸಲಿ ನೋಟುಗಳನ್ನು ಅಂಟಿಸಲಾಗಿತ್ತು!
ಹಣ ಡಬಲ್ ಮಾಡಿಕೊಡಲಾಗುವುದೆಂದು ಪುಸಲಾಯಿಸಿ 5 ಲಕ್ಷ ರೂಪಾಯಿ ದೋಚಿಕೊಂಡು ಪರಾರಿಯಾಗಿರುವ ಘಟನೆ ಮಂಗಳವಾರ ಮಧ್ಯಾಹ್ನ ಮದ್ದೂರು ತಾಲೂಕಿನ ಉಪ್ಪಿನಕೆರೆ ಗೇಟ್ ಬಳಿ ನಡೆದಿದೆ. ವಂಚಕರ ಮಾತು ನಂಬಿ ಬಂದ ಕುಣಿಗಲ್ ಮೂಲದ ಪುನೀತ್ ಮತ್ತು ಕಿರಣ್ ಹಣ ಕಳೆದುಕೊಂಡಿದ್ದಾರೆ.
ಘಟನೆ ವಿವರ: ಉಪ್ಪಿನಕೆರೆ ಗೇಟ್ ಬಳಿಯ ಶ್ರೀ ಕಬ್ಬಾಳಮ್ಮ ಟೀ ಸ್ಟಾಲ್ ಹತ್ತಿರ ಮಂಗಳವಾರ ಮಧ್ಯಾಹ್ನ ಸುಮಾರು 12 ಗಂಟೆ ಸುಮಾರಿನಲ್ಲಿ ಪುನೀತ್ ಮತ್ತು ಕಿರಣ್ ಬೈಕ್ನಲ್ಲಿ ಬಂದು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದರು ಎನ್ನಲಾಗಿದೆ. ಸ್ವಲ್ಪ ಸಮಯದ ನಂತರ ಅದೇ ಸ್ಥಳಕ್ಕೆ ಕೋಲಾರ ಮೂಲದ ಇಬ್ಬರು ವ್ಯಕ್ತಿಗಳು ಕಾರಿನಲ್ಲಿ ಬಂದಿದ್ದಾರೆ. ನಂತರ ಹಣ ವಿನಿಮಯ ಮಾಡಿಕೊಳ್ಳಲು ನಾಲ್ವರೂ ಕಾರಿನಲ್ಲಿಯೇ ಕುಳಿತು ವ್ಯವಹಾರ ಕುದುರಿಸಲು ಶುರು ಮಾಡಿದ್ದಾರೆ. ಈ ವೇಳೆ ಪುನೀತ್ ಮತ್ತು ಕಿರಣ್ ಅವರಿಂದ 5 ಲಕ್ಷ ರೂಪಾಯಿ ಅಸಲಿ ನೋಟುಗಳಿದ್ದ ಬ್ಯಾಗ್ ಅನ್ನು ಅರೋಪಿಗಳು ಪಡೆದುಕೊಂಡಿದ್ದಾರೆ. ಆದರೆ ಆರೋಪಿಗಳು ತಂದಿದ್ದ ಬ್ಯಾಗ್ನಲ್ಲಿ ಕೆಳಗಡೆ ನೋಟ್ ಬುಕ್ಗಳನ್ನು ತುಂಬಿ ಮೇಲುಗಡೆ ಮಾತ್ರ 100, 200, 500 ರೂಪಾಯಿ ಮುಖಬೆಲೆಯ ಅಸಲಿ ನೋಟುಗಳನ್ನು ಅಂಟಿಸಿದ್ದು, ಅದರಲ್ಲಿ 10 ಲಕ್ಷ ರೂಪಾಯಿ ಇರುವುದಾಗಿಯೂ, ಹೊರಗೆ ಹೋಗಿ ಎಣಿಸಿಕೊಳ್ಳುವಂತೆಯೂ ತಿಳಿಸಿ, ಅವರನ್ನು ಕಾರಿನಿಂದ ಕೆಳಗಿಳಿಸಿ 5 ಲಕ್ಷ ರೂಪಾಯಿ ಅಸಲಿ ಹಣದೊಂದಿಗೆ ಮಳವಳ್ಳಿ ಕಡೆಗೆ ಪರಾರಿಯಾಗಿದ್ದಾರೆ.
ಕಾರಿನಿಂದ ಕೆಳಗೆ ಇಳಿದು ಹಣ ಎಣಿಸಲು ಮುಂದಾದ ವೇಳೆ ಸತ್ಯಾಂಶ ಗೊತ್ತಾಗಿದೆ. ಹಣ ಕಳೆದುಕೊಂಡ ವ್ಯಕ್ತಿಗಳು ತಕ್ಷಣವೇ ಮಳವಳ್ಳಿ ಕಡೆಗೆ ಹೋಗುತ್ತಿದ್ದ ಬೇರೊಂದು ಕಾರನ್ನು ಅಡ್ಡಗಟ್ಟಿ ಫಾಲೋ ಮಾಡಿದ್ದಾರೆ. ಆದರೆ, ಕಾರು ತುಂಬ ವೇಗವಾಗಿ ಹೋದ ಕಾರಣ ಆರೋಪಿಗಳು ಕ್ಷಣಾರ್ಧದಲ್ಲೇ ಕಣ್ಮರೆಯಾಗಿದ್ದಾರೆ.
ಹಣ ಕಳೆದುಕೊಂಡ ಕಿರಣ್ ಕೆ.ಎಂ. ದೊಡ್ಡಿ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಮದ್ದೂರು ಸರ್ಕಲ್ ಇನ್ಸ್ಸ್ಪೆಕ್ಟರ್ ಕೆ.ಎನ್. ಹರೀಶ್, ಕೆ.ಎಂ. ದೊಡ್ಡಿ ಠಾಣೆಯ ಸಬ್ ಇನ್ಸ್ಸ್ಪೆಕ್ಟರ್ ಮಹದೇವಪ್ಪ, ಮದ್ದೂರು ಠಾಣೆಯ ಅಪರಾಧ ವಿಭಾಗದ ಸಬ್ ಇನ್ಸ್ಸ್ಪೆಕ್ಟರ್ ರವಿ ಹಾಗೂ ಅಪರಾಧ ಪತ್ತೆ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಣ ಕಳೆದುಕೊಂಡ ಪುನೀತ್, ಕಿರಣ್ ಇಬ್ಬರನ್ನೂ ಪೋಲೀಸರು ವಶಕ್ಕೆ ತೆಗೆದುಕೊಂಡಿದ್ದು, ಮದ್ದೂರು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳಿಗಾಗಿ ಮದ್ದೂರು ಪೊಲೀಸರು ಬಲೆ ಬೀಸಿದ್ದಾರೆ.