

ಶಿರಸಿ: ಬನವಾಸಿಯ ಸಾಲು ಮರದ ತಿಮ್ಮಕ್ಕ ಉದ್ಯಾನಕ್ಕೀಗ ವಿಶೇಷ ಮೆರುಗು ಬಂದಿದೆ.
ಕನ್ನಡ ಪ್ರಥಮ ರಾಜಧಾನಿ ಬನವಾಸಿ ಐತಿಹಾಸಿಕ ಮಹತ್ವವುಳ್ಳ ಪ್ರದೇಶ. ಇಲ್ಲಿ ಸಾಕಷ್ಟು ಸಂಗತಿಗಳು ಅಡಕವಾಗಿವೆ. ಉದ್ಯಾನದಲ್ಲಿ ಅಳವಡಿಸಿದ ಫಲಕಗಳಲ್ಲಿನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಸಾಕು ಸಮಗ್ರ ವಿವರ ಲಭ್ಯವಾಗುತ್ತದೆ. ಅರಣ್ಯ ಇಲಾಖೆಯ ಪ್ರಯೋಗಕ್ಕೆ ವ್ಯಾಪಕ ಸ್ಪಂದನೆ ವ್ಯಕ್ತವಾಗುತ್ತಿದೆ.
ಇಲ್ಲಿನ ದಾಸನಕೊಪ್ಪ ಮಾರ್ಗದಂಚಿನ ಉದ್ಯಾನದಲ್ಲಿ 14 ಫಲಕಗಳನ್ನು ಅಳವಡಿಸಲಾಗಿದೆ. ಪ್ರತಿ ಫಲಕದಲ್ಲಿನ ಕ್ಯೂಆರ್ ಕೋಡ್ ಸ್ಕಾನ್ ಮಾಡಿದರೆ ಆ ವಿಷಯಗಳ ಕುರಿತ ಮಾಹಿತಿ ಖಜಾನೆಯೇ ತೆರೆದುಕೊಳ್ಳುತ್ತದೆ. ಇದರಿಂದ ಮಾಹಿತಿ ಬರೆದುಕೊಳ್ಳುವ ಅಥವಾ ವೆಬ್‌ಪೇಜ್ ನೋಡಬೇಕಿಲ್ಲ.
ಸುಮಾರು 18 ಎಕರೆ ವ್ಯಾಪ್ತಿ ಹೊಂದಿರುವ ಉದ್ಯಾನದ ವಾಕಿಂಗ್ ಪಥದಂಚಿನಲ್ಲಿರುವ 25ಜಾತಿಯ ಗಿಡಗಳ ಹೆಸರು, ವಿಶೇಷತೆ, ವೈಜ್ಞಾನಿಕ ಹೆಸರುಗಳ ಫಲಕಗಳನ್ನೂ ಅಳವಡಿಸಲಾಗಿದೆ. ಇಲ್ಲಿ ಮಕ್ಕಳ ಉದ್ಯಾನ, ಚಿಟ್ಟೆಗಳ ಉದ್ಯಾನ, ತೂಗುಯ್ಯಲೆ, ಧ್ಯಾನ ಕೇಂದ್ರಗಳಿವೆ. ಕದಂಬ ಗಿಡಗಳನ್ನು ಪ್ರತ್ಯೇಕವಾಗಿ ಬೆಳೆಸಲಾಗಿದೆ. ಹಂತಹಂತವಾಗಿ ಉದ್ಯಾನ ವಿಸ್ತರಣೆ, ಅಭಿವೃದ್ಧಿ ಆಗುತ್ತಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.
ಬನವಾಸಿಯಲ್ಲಿ ಕದಂಬ ವಿಶೇಷತೆ ಒಳಗೊಂಡಿರುವ ಉದ್ಯಾನ ಮಾಡಬೇಕು ಎಂದು ಸಿಸಿಎಫ್ ವಸಂತ ರೆಡ್ಡಿ ಅವರು ಸೂಚಿಸಿದ್ದರು. ಹೀಗಾಗಿ ಸಾಲುಮರದ ತಿಮ್ಮಕ್ಕ ಉದ್ಯಾನಕ್ಕೆ ಕದಂಬರ ನಡಿಗೆ ಎಂದು ಹೆಸರಿಟ್ಟು ವಾಕ್‌ಪಥ ನಿರ್ಮಿಸಿದ್ದೇವೆ. ಅಂಚಿನಲ್ಲಿ ಕಳೆದ ಕೆಲವು ತಿಂಗಳ ಹಿಂದೆ ಫಲಕಗಳನ್ನು ಅಳವಡಿಸಲಾಗಿದೆ. ಇನ್ನಷ್ಟೇ ಕದಂಬ ನಡಿಗೆ ಉದ್ಘಾಟನೆ ಆಗಬೇಕಿದೆ.I ವರದರಂಗನಾಥ ಜಿ.ಎಚ್., ವಲಯಾರಣ್ಯಾಧಿಕಾರಿ ಬನವಾಸಿಯ ಇತಿಹಾಸವನ್ನು ಸಾರ್ವಜನಿಕರಿಗೆ ತಿಳಿಸಲು ಅರಣ್ಯ ಇಲಾಖೆಯು ಅರ್ಥಪೂರ್ಣ ಕೆಲಸ ಮಾಡಿದೆ. ಇದು ನಿಜಕ್ಕೂ ಶ್ಲಾಘನೀಯ ಕಾರ್ಯ.Iಗಣಪತಿ ಗೌಡರ್ ,ಬನವಾಸಿ