ಕುಂಬಾರಿಕೆ ವೃತ್ತಿಗೆ ಆಧುನಿಕ ಸ್ಪರ್ಷ

KUMBARA
Published on

ಮಲ್ಲು ಕಳಸಾಪುರ ಲಕ್ಷ್ಮೇಶ್ವರ

ಕುಂಬಾರಿಕೆ, ಕಮ್ಮಾರಿಕೆ, ಚಮ್ಮಾರಿಕೆ, ಬಡಿಗೆತನ ಹೀಗೆ ಹಲವು ಸಾಂಪ್ರದಾಯಿಕ ವೃತ್ತಿಗಳು ತಂತ್ರಜ್ಞಾನದ ಪ್ರಭಾವದಿಂದ ಹೊಸ ರೂಪ ಪಡೆದುಕೊಳ್ಳುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಮಣ್ಣಿನಿಂದ ಗಡಿಗೆ, ಮಡಿಕೆ, ಒಲೆ, ಹಣತೆ ಇತರೆ ಸಾಮಾಗ್ರಿಗಳನ್ನು ಮಾಡುವ ಕುಂಬಾರರು ಸಹ ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳ ಸಚಿವಾಲಯದ ಸಹಾಯದಿಂದ ವಿದ್ಯುತ್ ಚಾಲಿತ ಕುಂಬಾರಿಕಾ ಯಂತ್ರಗಳನ್ನು ಪಡೆದು ಅದರಿಂದ ಸುಂದರ ಮಣ್ಣಿನ ಉಪಕರಣಗಳನ್ನು ಮಾಡುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿಯ ಪಥದತ್ತ ಸಾಗುತ್ತಿದ್ದಾರೆ.

ತಂತ್ರಜ್ಞಾನ ಮತ್ತು ಪ್ಲಾಸ್ಟಿಕ್ ಪ್ರಭಾವದಿಂದ ಕುಂಬಾರರು ಸಿದ್ಧಪಡಿಸುವ ಮಣ್ಣಿನ ವಸ್ತುಗಳಿಗೆ ಬೇಡಿಕೆ ಕುಸಿದು ಕುಂಬಾರರ ಬದುಕು ಸಂಕಷ್ಟಕ್ಕೆ ಸಿಲುಕಿತ್ತು. ಬೇಸಿಗೆ ಕಾಲ, ಗಣೇಶನ ಹಬ್ಬ ಸೇರಿ ಕೆಲ ಸಾಂಪ್ರದಾಯಿಕ ಆಚರಣೆಗಳಿಗೆ ಮಾತ್ರ ಕುಂಬಾರರಿಗೆ ಬೇಡಿಕೆ. ಹೀಗಾಗಿ ಯುವಕರು ಈ ವೃತ್ತಿಯಿಂದ ಹಿಂದೆ ಸರಿಯುವಂತಾಗಿತ್ತು. ಆದರೆ, ಈಗ ಕುಂಬಾರಿಕೆಗೂ ಆಧುನಿಕತೆಯ ಸ್ಪರ್ಷ ಸಿಕ್ಕಿದ್ದರಿಂದ ಕುಂಬಾರರ ಬದುಕಿನಲ್ಲಿ ಹೊಸ ಹುರುಪು ತಂದಿದೆ.

ಲಕ್ಷ್ಮೇಶ್ವರಕ್ಕೆ ಬಂದ ಮೊದಲ ಯಂತ್ರ: ಹಳೆಯ ಪದ್ಧತಿಯಲ್ಲಿ ತಿರುಗಿಸುವ ಚಕ್ರದಲ್ಲಿ ಮಣ್ಣಿನಿಂದ ಮಡಿಕೆ ಮಾಡುತ್ತಿದ್ದರು. ಇದೀಗ ಖಾದಿ ಮತ್ತು ಗ್ರಾಮೋದ್ಯೋಗ ನಿಗಮ, ಕೇಂದ್ರ ಮಧ್ಯಮ ಮತ್ತು ಸೂಕ್ಷ್ಮ ಕೈಗಾರಿಕೆಗಳ ಸಚಿವಾಲಯ ಮತ್ತು ಕೇಂದ್ರೀಯ ಗ್ರಾಮೀಣ ಕುಂಬಾರಿಕೆ ಸಂಸ್ಥೆಯ ಸಹಯೋಗದಲ್ಲಿ ಕುಂಬಾರಿಕೆ ತರಬೇತಿ ಪಡೆದ ವೃತ್ತಿ ಕಲಾವಿದರಿಗೆ ವಿದ್ಯುತ್ ಚಾಲಿತ ಕುಂಬಾರಿಕೆ ಯಂತ್ರಗಳನ್ನು ನೀಡಿ ಕುಂಬಾರಿಕೆ ವೃತ್ತಿಗೆ ಪ್ರೇರಣೆ ನೀಡಿದಂತಾಗಿದೆ. ಈ ವಿದ್ಯುತ್ ಚಾಲಿತ ಯಂತ್ರ ಬಳಕೆ ಎಲ್ಲೆಡೆ ಹೆಚ್ಚುತ್ತಿದೆ. ಲಕ್ಷ್ಮೇಶ್ವರದ ಕುಂಬಾರ ಕುಟುಂಬದ ಪದವೀಧರ ಯುವಕ ಚಂದ್ರಶೇಖರ ಗಡ್ಡೆಣ್ಣವರ (ಕುಂಬಾರ) ತಮ್ಮ ವಂಶಪಾರಂಪರ್ಯದ ಕುಂಬಾರಿಕೆ ವೃತ್ತಿ ಮಾಡುವ ಉದ್ದೇಶದಿಂದ ಸರ್ಕಾರದ ಗ್ರಾಮೋದ್ಯೋಗ ವಿಕಾಸ ಯೋಜನೆಯಡಿ ಬೆಳಗಾವಿ ಜಿಲ್ಲೆ ಖಾನಾಪೂರದಲ್ಲಿ ನಾಲ್ಕು ತಿಂಗಳ ತರಬೇತಿಯೊಂದಿಗೆ ನೀಡಿದ ಈ ಯಂತ್ರದಿಂದ ಮಣ್ಣಿನ ಮಡಿಕೆ, ಹಣತೆ, ಮುಚ್ಚಳ ಅನೇಕ ಸಾಂಪ್ರದಾಯಿಕ ವಸ್ತುಗಳನ್ನು ತಯಾರಿಸುತ್ತಿದ್ದಾರೆ.

ಹಳೆಯ ಪದ್ಧತಿ ಉಪಯೋಗ ವಿರಳ: ಹಳೆಯ ಪದ್ಧತಿಯಂತೆಯೇ ಕೈಯಿಂದ ತಿರುಗಿಸುವ ಚಕ್ರದ ರೀತಿಯಲ್ಲಿಯೇ ವಿದ್ಯುತ್ ಚಾಲಿತ ಈ ಯಂತ್ರದಿಂದ ಮಣ್ಣಿನ ಸಾಮಗ್ರಿಗಳನ್ನು ಸಿದ್ಧಪಡಿಸಬಹುದಾಗಿದೆ. ಇದು ಹೆಚ್ಚು ವೇಗದಲ್ಲಿ ಮತ್ತು ಸುಂದರವಾಗಿ ವಸ್ತುಗಳನ್ನು ತಯಾರಿಸಬಹುದಾಗಿದೆ. ಈ ಯಂತ್ರವನ್ನು ಮನೆಯ ಒಳಗೆ ಕಡಿಮೆ ಜಾಗದಲ್ಲಿ ಇಟ್ಟುಕೊಂಡು ಉದ್ಯೋಗ ನಡೆಸಲು ಹಾಗೂ ಸ್ಥಳಾಂತರಿಸಲು ಅನುಕೂಲವಾಗಿದ್ದು ಕುಂಬಾರರಿಗೆ ಹೆಚ್ಚು ಉಪಯುಕ್ತವಾಗಿದೆ.

ಕೇಂದ್ರ ಸರ್ಕಾರ ಸಾಂಪ್ರದಾಯಿಕ ವೃತ್ತಿಯನ್ನು ಉತ್ತೇಜಿಸುವ ಮತ್ತು ಕುಂಬಾರಿಕೆ ಉದ್ಯೋಗವನ್ನು ಮತ್ತಷ್ಟು ಆಧುನಿಕರಣಗೊಳಿಸುವ ನಿಟ್ಟಿನಲ್ಲಿ ವಿದ್ಯಾವಂತ ಯುವಕರಿಗೆ ತರಬೇತಿ ಜತೆಗೆ ಉಚಿತವಾಗಿ ನೀಡಿದ ಈ ಯಂತ್ರ ಹೆಚ್ಚು ಉಪಯುಕ್ತವಾಗಿದೆ. ಗುಣಮಟ್ಟ, ನೈಪುಣ್ಯತೆ, ಸುಂದರವಾಗಿ ಕಡಿಮೆ ಅವಧಿಯಲ್ಲಿ ಹೆಚ್ಚು ವಸ್ತುಗಳನ್ನು ಸಿದ್ಧಪಡಿಸಿ ಸ್ಫರ್ಧಾತ್ಮಕ ಬೆಲೆಗೆ ಮಾರಾಟ ಮಾಡಬಹುದಾಗಿದೆ. ಇದು ನಮ್ಮಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಿ ಆರ್ಥಿಕ ಸ್ವಾವಲಂಬನೆ, ಉದ್ಯೋಗ ಭದ್ರತೆ ಹೆಚ್ಚಿಸಿದೆ. ಚಂದ್ರಶೇಖರ ಗಡ್ಡೆಣ್ಣವರ, ವೃತ್ತಿ ಕಲಾವಿದ ಲಕ್ಷ್ಮೇಶ್ವರ ನಮ್ಮ ಹಿರಿಯರಿಂದ ಮಾಡುತ್ತಾ ಬಂದಿರುವ ಉದ್ಯೋಗವನ್ನು ಯುವಕರು ಜಾಣ್ಮೆಯಿಂದ ಮುಂದುವರಿಸಿರುವುದು ಖುಷಿ, ನೆಮ್ಮದಿ ತಂದಿದೆ. ಹೊಸ ಯಂತ್ರ ಕುಂಬಾರಿಕೆ ಉದ್ಯೋಗಕ್ಕೆ ಹೆಚ್ಚು ಉಪಯುಕ್ತವಾಗಲಿದೆ. ವಿರುಪಾಕ್ಷಪ್ಪ ಗಡ್ಡೆಣ್ಣವರ, ಕುಂಬಾರಿಕೆ ವೃತ್ತಿ ಕಲಾವಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net