

ಪರಶುರಾಮಪುರ: ಗ್ರಾಮದ ಯುವಕರ ಪರಿಶ್ರಮದಿಂದ ಸರ್ಕಾರಿ ಶಾಲಾ ಮಕ್ಕಳು ಕಬ್ಬಡಿ ಪಂದ್ಯಾವಳಿಯಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿ, ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಲು ಸಾಧ್ಯವಾಗಿದೆ ಎಂದು ಶಾಲಾ ಸಮಿತಿ ಅಧ್ಯಕ್ಷ ಈಶ್ವರಪ್ಪ ಹೇಳಿದರು.
ಸಮೀಪದ ಪಿ.ಗೌರೀಪುರ ಗ್ರಾಮದ ಸಹಿಪ್ರಾ ಶಾಲಾ ಮೈದಾನದಲ್ಲಿ ಈಚೆಗೆ ಆಯೋಜಿಸಿದ್ದ ಕ್ರೀಡಾಪಟುಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಶಾಲೆ ವಿದ್ಯಾರ್ಥಿಗಳು ಈ ಸಾಧನೆ ಮಾಡಲು ಗ್ರಾಮದ ಯುವಕರು ಎಲ್ಲ ರೀತಿಯ ಸಹಕಾರ ನೀಡಿರುವುದೇ ಕಾರಣ. ಇದೇ ರೀತಿ ಪ್ರೋತ್ಸಾಹ ದೊರೆತರೆ ಸರ್ಕಾರಿ ಶಾಲೆ ಮಕ್ಕಳು ಅದ್ವಿತೀಯ ಸಾಧನೆ ಮಾಡುತ್ತಾರೆ ಎಂದರು.
ಬಡ್ತಿ ಮುಖ್ಯಶಿಕ್ಷಕ ಟಿ.ಎಲ್.ಪ್ರಸನ್ನ ಮಾತನಾಡಿದರು. ಗ್ರಾಪಂ ಮಾಜಿ ಸದಸ್ಯ ವೀರೇಶ, ಶಿಕ್ಷಕರಾದ ಕೆ.ಲೋಕೇಶ, ಸತೀಶಕುಮಾರ, ಎಂ.ಚಂದ್ರಕಲಾ ಇದ್ದರು.
ಶಾಲಾ ಶಿಕ್ಷಣ ಇಲಾಖೆ, ಶಾಲಾ ಸಮಿತಿ, ಗ್ರಾಮದ ಯುವಕರ ಪಡೆ ಹಾಗೂ ಸಹಿಪ್ರಾಶಾಲಾ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಾಜೂರು: ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಬಾಲಕರು ತಾಲೂಕು ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಮುಖ್ಯಶಿಕ್ಷಕ ಕರಿಯಣ್ಣ ತಿಳಿಸಿದ್ದಾರೆ. ತಂಡದ ಅನಿಲ್‌ಕುಮಾರ್, ನಂದಕಿಶೋರ್, ಶಿವಕುಮಾರ, ಮಂಜುನಾಥ, ದೇವರಾಜು, ಅಭಿಲಾಷ್, ಚರಣ್, ಆಕಾಶ್, ತಿಪ್ಪೇಶ್, ಧನುಷ್, ಕಾರ್ತಿಕ್, ದಿನೇಶ ಇವರ ಸಾಧನೆಗೆ ಶಿಕ್ಷಕ ವರ್ಗ ಮೆಚ್ಚುಗೆ ವ್ಯಕ್ತಪಡಿಸಿದೆ.