

ಜಮಖಂಡಿ: ಚಿತ್ರಕಲಾವಿದ ದಿ.ವಿಜಯ ಸಿಂಧೂರ ಅವರು ತಮ್ಮಲ್ಲಿರುವ ಕಲೆ ಬಳಸಿಕೊಂಡು ಸಾವಿರಾರು ಕಲಾಕೃತಿ ರಚಿಸಿ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರಮಟ್ಟದಲ್ಲಿ ಬೆಳಕು ಚೆಲ್ಲುವ ಕಾರ್ಯ ಮಾಡಿ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಯುವ ಕಲಾವಿದರಿಗೆ ಆದರ್ಶ ಪ್ರಾಯರಾಗಿದ್ದಾರೆ ಎಂದು ಓಲೇಮಠದ ಆನಂದ ದೇವರು ಹೇಳಿದರು.
ನಗರದ ಕೋಷ್ಠಿಗಲ್ಲಿಯ ವಿಜಯ ಸಿಂಧೂರ ಆರ್ಟ್ ಗ್ಯಾಲರಿಯಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ, ವಿಜಯಪುರದ ಕ್ಯಾನವಾಸ್ ಆರ್ಟ್ ೌಂಡೇಷನ್ ಹಾಗೂ ಜಮಖಂಡಿಯ ವಿಜಯ ಸಿಂಧೂರ ಆರ್ಟ್ ಗ್ಯಾಲರಿ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಜಯ ಸಿಂಧೂರ ಪ್ರಶಸ್ತಿ ಪ್ರದಾನ ಹಾಗೂ ಚಿತ್ರಕಲಾ ಶಿಬಿರವನ್ನು ಚಿತ್ರ ಬಿಡಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಭಗವಂತ ಹೇಗೆ ಇದ್ದಾನೆ ಎಂಬುದನ್ನು ನಾವು ಯಾರೂ ನೋಡಿರುವುದಿಲ್ಲ. ಪುರಾಣ, ಪ್ರವಚನದಲ್ಲಿ ಮಾತ್ರ ಕೇಳಿದ್ದೇವೆ. ಆದರೆ ಚಿತ್ರ ಕಲಾವಿದರು ಪುರಾಣದಲ್ಲಿ ಬರುವಂತಹ ಸನ್ನಿವೇಶಗಳನ್ನು ಆಧಾರವಾಗಿಟ್ಟುಕೊಂಡು ಕಲ್ಪನೆ ಮೂಲಕ ಚಿತ್ರ ಬಿಡಿಸುವ ಅಗಾಧವಾದ ಶಕ್ತಿ ಹೊಂದಿರುತ್ತಾರೆ ಎಂದರು.
ಸ್ವರ್ಣಶಿಲ್ಪಿ ಕೆ.ವೆಂಕಟಪ್ಪ ಪ್ರಶಸ್ತಿ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ದಿ. ವಿಜಯ ಸಿಂಧೂರ ಅವರ ಹೆಸರಿನಲ್ಲಿ ಕೊಡುವ ಪ್ರಶಸ್ತಿ ಯುವ ಚಿತ್ರ ಕಲಾವಿದರಿಗೆ ಸ್ಫೂರ್ತಿದಾಯಕವಾಗಲಿ. ಈ ಪ್ರಶಸ್ತಿ ಜ್ಞಾನದ ಜ್ಯೋತಿ ಕೊಡುವಂತಾಗಲಿ ಎಂದು ಹಾರೈಸಿದರು.
ಹಿರಿಯ ಕಲಾವಿದ ಬಾಬು ಜತ್ತಕರ್ ಮಾತನಾಡಿ, ದಿ.ವಿಜಯ ಸಿಂಧೂರ ಅವರು ನೇರ, ನಿಷ್ಠುರ, ಶಿಸ್ತು ಬದ್ಧತೆಗೆ ಹೆಸರುವಾಸಿಯಾಗಿದ್ದರು. ರಾಷ್ಟ್ರ, ಅಂತಾರಾಷ್ಟ್ರಮಟ್ಟದ ಶ್ರೇಷ್ಠ ಕಲಾವಿದರಾದ ಇವರು ಪೋಟ್ರೆಟ್ ಪೇಂಟಿಂಗ್‌ನಲ್ಲಿ ಅಪಾರ ಜ್ಞಾನ ಹೊಂದಿ ನೂರಾರು ಕಲಾಕೃತಿ ರಚಿಸಿ ಜನ ಮನ್ನಣೆಗೆ ಪಾತ್ರರಾಗಿದ್ದರು ಎಂದರು.
ಹಿರಿಯ ನ್ಯಾಯವಾದಿ ಡಾ. ಟಿ.ಪಿ. ಬಾಂಗಿ ಮಾತನಾಡಿ, ವಿವಿಧ ರಾಜ್ಯಗಳಲ್ಲಿ ವಿಜಯ ಸಿಂಧೂರ ಅವರು ಚಿತ್ರಕಲಾ ಪ್ರದರ್ಶನ ಮಾಡಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಇಂದಿನ ಯುವ ಕಲಾವಿದರು ಕಲೆಯನ್ನು ಕೇವಲ ಹವ್ಯಾಸಕ್ಕಾಗಿ ಬಳಸದೆ ಅದರ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ಉಳಿಸಿ ಬೆಳೆಸುವಂತವರಾಗಬೇಕು ಎಂದರು.
ಬಸವರಾಜ ಮುಸಂಡಿ, ಪೂರ್ಣಿಮಾ ಮುಸಂಡಿ, ಮಹಾನಂದ ಸಿಂಧೂರ, ರಾಜು ಸಿಂಧೂರ, ಜಯದೀಪ ಯಾವಗಲ್, ಜ್ಯೋತಿ ಯಾವಗಲ್, ಸೋಮು ಸಿಂಧೂರ, ಸ್ವಪ್ನಿಲ್ ಸಿಂಧೂರ, ಸಾಚಿ ಸಿಂಧೂರ, ಪ್ರಥಾ ಯಾವಗಲ್, ವಿನಾಯಕ ದಡ್ಡಿಮನಿ, ಕೃತಿಕಾ ದಡ್ಡಿಮನಿ ಇದ್ದರು.
ಚಿತ್ರಕಲಾವಿದರಾದ ಜಿ.ವಿ. ಹಂಪಣ್ಣವರ, ಬಿ.ಎಸ್. ಪಾಟೀಲ, ಪ್ರಭಾಕರ ಮಂಕಾಲ, ಎಚ್.ಎಂ. ವಿಶ್ವನಾಥ, ಶಿವು ಹೂಗಾರ, ಗಂಗಾಧರ ಮಾಯಾಚಾರಿ, ಸುಶೀಲ ತರಬರ, ಕೆ.ಎಸ್. ಬಸವರಾಜು, ಪ್ರಶಾಂತ ಮನಗೂಳಿ, ಸಂತೋಷ ಗುಡ್ಡೋಡಗಿ ವಿವಿಧ ಕಲಾಕೃತಿ ರಚಿಸಿದರು.
ಪತ್ರಕರ್ತ ಶಿವಾನಂದ ಕೊಣ್ಣೂರ ಸ್ವಾಗತಿಸಿದರು. ವಿಜಯಪುರದ ಕ್ಯಾನವಾಸ್ ಆರ್ಟ್ ೌಂಡೇಷನ್ ಕಾರ್ಯದರ್ಶಿ ರಮೇಶ ಚವಾಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಮೃತಾ ರಾಜು ಸಿಂಧೂರ ವಂದಿಸಿದರು.