

ಸಿದ್ದಾಪುರ: ವಾಹನ ಚಾಲಕರ ಮಜ್ದೂರ್ ಸಂಘದ 32ನೇ ವರ್ಷದ ಆಯುಧ ಪೂಜೆ ಆಚರಣೆ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ಸಂಘದ ಜಿಲ್ಲಾಧ್ಯಕ್ಷ ಸೂದನ ಸತೀಶ್ ಧ್ವಜಾರೋಹಣ ನೆರವೇರಿಸಿದರು. ಸಂಘದ ನೇತೃತ್ವದಲ್ಲಿ ವಾಹನಗಳ ಸಾಮೂಹಿಕ ಪೂಜೆ ನಡೆಯಿತು. ಕ್ರೀಡಾಕೂಟಕ್ಕೆ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಚಾಲನೆ ನೀಡಿದರು.
ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಸಾಮಾಜಿಕ ನ್ಯಾಯ ಸಮಿತಿ ಸದಸ್ಯ ವಿಜು ಸುಬ್ರಮಣಿ, ಕರಕುಶಲ ಕಾರ್ಮಿಕ ಹಾಗೂ ಶ್ರಮಿಕ ವರ್ಗ ವರ್ಷಪೂರ್ತಿ ದುಡಿದು ಆಯುಧಗಳನ್ನು ಗೌರವಿಸಿ ಪೂಜಿಸುವ ಪೌರಾಣಿಕ ಹಿನ್ನೆಲೆ ಹೊಂದಿದೆ ಹಬ್ಬವಾದ ಆಯುಧ ಪೂಜೆಯನ್ನು ವಾಹನ ಚಾಲಕರ ಮಜ್ದೂರ್ ಸಂಘವು ಕಳೆದ 32 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವುದು ಸಂಘದಲ್ಲಿನ ಐಕ್ಯತೆ, ಸೇವಾ ಮನೋಭಾವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ನಿಜಕ್ಕೂ ಇವರ ಸೇವೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೈಸೂರು ದಸರಾ ಯೋಗ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ವಿಜೇತ ಕೆ.ಪಿ.ಸುಮೇಶ್, ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ಜಿಲ್ಲಾ ಆಯುಕ್ತ ಜಿಮ್ಮಿ ಸಿಕ್ವೇರಾ ಹಾಗೂ ಅಂತಾರಾಷ್ಟ್ರೀಯ ಬಾಲಕಿಯರ ಫುಟ್‌ಬಾಲ್ ತಂಡಕ್ಕೆ ಆಯ್ಕೆಯಾದ ದೀನಾ ಮೋಹನ್ ದೇವ ಅವರನ್ನು ಸನ್ಮಾನಿಸಲಾಯಿತು.
ಸುರೇಶ್, ಅನೀಶ್, ವಿನು ಕುಮಾರ್ಙ, ರತೀಶ್, ಪ್ರತೀಶ, ರಾಧಾಕೃಷ್ಣ ಅನಿಲ್ ಕುಮಾರ್ ಪಿ.ಕೆ. ರವಿ ಇದ್ದರು.