ಸಮಾಜಕ್ಕೆ ಮಾದರಿಯಾದ ಕುಟುಂಬ ಸಮ್ಮಿಲನ

28 ckm 2
ಚಿಕ್ಕಮಗಳೂರು ಜಿಲ್ಲೆ ಬೊಗಸೆ ಗ್ರಾಮದ ದೇವರಗದ್ದೆ ಕುಟುಂಬಸ್ಥರ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕುಟುಂಬಸ್ಥರು.
Published on

ಚಿಕ್ಕಮಗಳೂರು: ಇಂದು ಅವಿಭಕ್ತ ಕುಟುಂಬಗಳೇ ಇಲ್ಲದಂತಾಗಿದೆ. ಇನ್ನು ಹಳ್ಳಿಗಳಿಂದ ಉದ್ಯೋಗ ಅರಸಿ ಪಟ್ಟಣ ಸೇರಿದವರು ಮತ್ತೆ ಹಳ್ಳಿಗಳಿಗೆ ಬರುವುದು ದೂರದ ಮಾತು. ಹೀಗಾಗಿ ತಮ್ಮ ಕುಟುಂಬದ ಸದಸ್ಯರೇ ಯಾರೆಂದು ತಿಳಿಯದ ಸ್ಥಿತಿ ನಿರ್ಮಾಣವಾಗಿದೆ. ಹೀಗೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಗೆ ಹೋಗಿ ನೆಲೆಸಿರುವ ತಮ್ಮ ಕುಟುಂಬದವರನ್ನು ಒಂದೆಡೆ ಸೇರಿಸಿ ಪರಸ್ಪರ ಪರಿಚಯಿಸಿಕೊಳ್ಳುವ ಜೊತೆ ಆಟೋಟ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ‌ ಚಿಕ್ಕಮಗಳೂರು ಜಿಲ್ಲೆಯ ಬೊಗಸೆ ಗ್ರಾಮದ ಕುಟುಂಬವೊಂದು ಸಮಾಜಕ್ಕೆ‌ ಮಾದರಿಯಾಗಿದೆ.

ಹೌದು ಬೊಗಸೆ ಗ್ರಾಮದ ದೇವರಗದ್ದೆ ಕುಟುಂಬಸ್ಥರು ಚಿಕ್ಕಮಗಳೂರು, ಹಾಸನ, ಮಂಗಳೂರು, ಬೆಂಗಳೂರು ಹಾಗೂ ತಮಿಳುನಾಡಿನಲ್ಲಿ ವಾಸವಾಗಿದ್ದಾರೆ. ಎಲ್ಲರೂ ಹುಟ್ಟಿ ಬೆಳೆದಿದ್ದು ಬೊಗಸೆ ಗ್ರಾಮದಲ್ಲೇ ಆದರೂ ಊರಿನಿಂದ ದೂರವೇ ಉಳಿದಿದ್ದರು. ಹೀಗಾಗಿ ತಮ್ಮ ಕುಟುಂಬದ ಸದಸ್ಯರು ಯಾರು ಎಂಬುದೇ ಇಂದಿನ ಪೀಳಿಗೆಗೆ ಪರಿಚಯವಿಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಮನಗಂಡ ಕುಟುಂಬದ ಹಿರಿಯರು ಕುಟುಂಬದ ಎಲ್ಲರನ್ನೂ ಒಟ್ಟಿಗೆ ಸೇರಿಸುವ ಸಂಕಲ್ಪ ಮಾಡಿದ್ದರು. ಈ ಮೂಲಕವಾದರೂ ಯುವ ಜನತೆಗೆ ತಮ್ಮ ಕುಟುಂಬದವರು ಯಾರು ಎಂಬುದು ತಿಳಿಯಲಿ ಎಂಬುದು ಹಿರಿಯರ ಬಯಕೆಯಾಗಿತ್ತು.
ಹಿರಿಯರ ಆಶಯದಂತೆಯೇ ಕುಟುಂಬದವರನ್ನು ಒಂದುಗೂಡಿಸಲು ಮುಂದಾದ ಮಂಜಪ್ಪ ಶೆಟ್ಟಿ, ಹಾಲಪ್ಪ ಸತತ ಮೂರು ತಿಂಗಳ ಕಾಲ ಪ್ರಯತ್ನಪಟ್ಟು ತಮ್ಮ ಕುಟುಂಬದವರು ಎಲ್ಲಿದ್ದಾರೆ ಎಂಬ ಮಾಹಿತಿ ಕಲೆಹಾಕಿ ಕೊನೆಗೂ ಎಲ್ಲರನ್ನು ಒಂದುಗೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಿರಿಯರಿಗೆ ತಮ್ಮ ಕುಟುಂಬದ ಹಿರಿಯರು ಮಾತ್ರ ಪರಿಚಯವಿದ್ದರು. ಆದರೆ ಇತ್ತೀಚಿನ ಪೀಡಿಗೆಯ ಯಾರು ಸಹ ಹಿರಿಯರಿಗೆ ಪರಿಚಯವಿರಲಿಲ್ಲ. ಜೊತೆಗೆ ಯುವ ಪೀಳಿಗೆಗಂತೂ ತಮ್ಮ ಕುಟುಂಬದವರು ಎಲ್ಲಿದ್ದಾರೆ ಅವರು ಯಾರು ಎಂಬ ಮಾಹಿತಿಯು ಇರಲಿಲ್ಲ. ಹೀಗಿರುವಾಗ ಕುಟುಂಬ ಸಮ್ಮಿಲನ ಕಾರ್ಯಕ್ರಮಕ್ಕೆ ಆಹ್ವಾನಿಸಿದಾಗ ಎಲ್ಲರೂ ಸಂತಸದಿಂದಲೇ ಒಪ್ಪಿ ತಮ್ಮ ಹಿರಿಯರು ವಾಸಿಸುತ್ತಿದ್ದ ಬೊಗಸೆ ಗ್ರಾಮದ ಮನೆಗೆ ಆಗಮಿಸಿ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.
ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಬರೋಬ್ಬರಿ 120ಕ್ಕೂ ಹೆಚ್ಚು ಜನ ಭಾಗವಹಿಸಿದ್ದು ವಿಶೇಷವಾಗಿತ್ತು. ಪರಸ್ಪರ ಉಭಯ ಕುಶಲೋಪರಿ, ತಮ್ಮ ತಮ್ಮ ಬಗೆಗಿನ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇದೇ ಸಂದರ್ಭದಲ್ಲಿ ಕುಟುಂಬದ ಹಿರಿಯರಾದ ಕೃಷ್ಣ ಶೆಟ್ಟಿ ಅವರ 25ನೇ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ನಡೆಸಲಾಯಿತು.

ಸಂಬಂಧಿಕರಿಗೆ ಅಹ್ವಾನವಿಲ್ಲ
ಬೊಗಸೆ ಗ್ರಾಮದ ದೇವರಗದ್ದೆ ಕುಟುಂಬದ ಸಮ್ಮೇಳನ ಕಾರ್ಯಕ್ರಮದಲ್ಲಿ ಕೇವಲ ಕುಟುಂಬದ ಸದಸ್ಯರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಕುಟುಂಬದವರ ಹೊರತಾಗಿ ಯಾವುದೇ ಸಂಬಂಧಿಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಿಲ್ಲ. ಕಾರಣ ಸಂಬಂಧಿಕರು ಬಂದಲ್ಲಿ ಯುವಪೀಳಿಗೆಗೆ ಕುಟುಂಬದವರ ಪರಿಚಯ ಸರಿಯಾಗಿ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಜನ ಹೆಚ್ಚಾದರೆ ಯಾರು ಯಾರೆಂದು ಗೊತ್ತಾಗುವುದಿಲ್ಲ ಎಂಬ ಕಾರಣಕ್ಕೆ ಕೇವಲ ಕುಟುಂಬದವರನ್ನು ಮಾತ್ರ ಒಗ್ಗೂಡಿಸಲಾಗಿತ್ತು.

ಕೃಷ್ಣ ಶೆಟ್ಟಿ ಕುರಿತ ಪುಸ್ತಕ ಬರೆಯಲು ಸಿದ್ಧತೆ
ದೇವರಗದ್ದೆ ಕುಟುಂಬದ ಹಿರಿಯರಾದ ಬಿ.ಟಿ.ಕೃಷ್ಣಶೆಟ್ಟಿ ಬೊಗಸೆ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಿಗೆ ಪ್ರಭಾವಿ ವ್ಯಕ್ತಿಯಾಗಿದ್ದರು. ಯಾವುದೇ ರಾಜಿ ಪಂಚಾಯಿತಿ ಇದ್ದರೂ ತಾವೇ ಮುಂದೆ ನಿಂತು ಪರಿಹರಿಸಿ ಕೊಡುತ್ತಿದ್ದರು. ಹೀಗಾಗಿ ಅವರ ಸ್ಮರಣಾರ್ಥ ಪುಸ್ತಕ ಹೊರತರಲು ಕುಟುಂಬ ನಿರ್ಧರಿಸಿದೆ. ಆಲ್ದೂರು ಸಮೀಪದ ಹೊಸಳ್ಳಿಯ ಬರಹಗಾರ ಕೃಷ್ಣಶೆಟ್ಟಿ ಎನ್ನುವವರು ಪುಸ್ತಕ ಬರೆಯಲು ಆರಂಭಿಸಿದ್ದಾರೆ. ಮೂರು ತಿಂಗಳಲ್ಲಿ ಪುಸ್ತಕದ ಬರವಣಿಗೆ ಪೂರ್ಣಗೊಳ್ಳಲಿದ್ದು, ಚಿಕ್ಕಮಗಳೂರಿನಲ್ಲಿ ಕಾರ್ಯಕ್ರಮ ಆಯೋಜಿಸಿ ಪುಸ್ತಕ ಬಿಡುಗಡೆಗೊಳಿಸುವುದು ಕುಟುಂಬದ ಉದ್ದೇಶವಾಗಿದೆ.

ಸಾಂಸ್ಕೃತಿಕ ಕಾರ್ಯಕ್ರಮ
ಕುಟುಂಬ ಸಮ್ಮಿಲನದ ಹೆಸರಿನಲ್ಲಿ ಮೊದಲ ಬಾರಿಗೆ ಒಟ್ಟಿಗೆ ಸೇರಿದ ಕುಟುಂಬ ಸದಸ್ಯರು ಹಲವು ಆಟೋಟ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂತಸಪಟ್ಟರು. ಎಲ್ಲರೂ ಸೇರಿ ಹಾಡಿ ಕುಣಿದರು. ಕುಟುಂಬದ ಹಿರಿಯರ ಬಳಿ ತಮ್ಮ ಪೂರ್ವಜರ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡರು. ತಮ್ಮ ಊರು ತಮ್ಮ ಕುಟುಂಬ, ಪೂರ್ವಜರು ಮಾಡಿರುವ ತೋಟ ಹೀಗೆ ಎಲ್ಲೆಡೆಯೂ ಓಡಾಡಿ ಖುಷಿಪಟ್ಟರು. ಇದೇ ಸಂದರ್ಭದಲ್ಲಿ ಕುಟುಂಬದ ಹಿರಿಯರನ್ನು ಸನ್ಮಾನಿಸಿ ತೃಪ್ತಿ ಪಟ್ಟರು.

ಕುಟುಂಬದ ಎಲ್ಲರನ್ನೂ ಒಟ್ಟಿಗೆ ಸೇರಿಸಬೇಕು ಎಂಬುದು ಹಿರಿಯರ ಆಶಯವಾಗಿತ್ತು. ಅದರಂತೆ ಮೂರು ತಿಂಗಳು ಶ್ರಮಪಟ್ಟು ಎಲ್ಲರನ್ನೂ ಒಟ್ಟಿಗೆ ಸೇರಿಸಿದ್ದೇವೆ. ಈಗಲೂ ನಾವು ಒಟ್ಟಿಗೆ ಸೇರದೆ ಇದ್ದಲ್ಲಿ ನಮ್ಮ ಕುಟುಂಬದವರು ಯಾರು ಎಂಬುದೇ ಯುವ ಪೀಳಿಗೆಗೆ ಗೊತ್ತಾಗುತ್ತಿರಲಿಲ್ಲ. ಈಗ ಒಬ್ಬರನ್ನೊಬ್ಬರು ಪರಿಚಯ ಮಾಡಿಕೊಂಡಿದ್ದಾರೆ. ಸಾಕಷ್ಟು ಮಂದಿ ನಮಗೆ ಗೊತ್ತಿರಲಿಲ್ಲ ಎಲ್ಲರನ್ನೂ ಭೇಟಿ ಮಾಡಿ ಖುಷಿಯಾಗಿದೆ ಮುಂದಿನ ವರ್ಷಗಳಲ್ಲಿಯೂ ನಿರಂತರವಾಗಿ ಕುಟುಂಬದವರು ಒಟ್ಟಿಗೆ ಸೇರಬೇಕು ಎಂಬುದು ಎಲ್ಲರ ಅಭಿಲಾಶೆಯಾಗಿದೆ. ಕುಟುಂಬದ ಹಿರಿಯರ ಖುಷಿಗಂತೂ ಪಾರವೇ ಇಲ್ಲ.
ಮಂಜಪ್ಪ ಶೆಟ್ಟಿ, ದೇವರಗದ್ದೆ ಕುಟುಂಬಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net