

ಹುಬ್ಬಳ್ಳಿ: ಸ್ಟೈಫಂಡ್ ಹೆಚ್ಚಳ ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಕಿಮ್ಸ್ ಸ್ಥಾನಿಕ ವೈದ್ಯರ ಸಂಘದ(ಕೆಆರ್‌ಡಿ) ನೇತೃತ್ವದಲ್ಲಿ ನಗರದಲ್ಲಿ ಮಂಗಳವಾರ ಅಣಕು ಶವಯಾತ್ರೆ ನಡೆಯಿತು.
ಕೆಎಂಸಿ ಆವರಣದಿಂದ ಚನ್ನಮ್ಮ ವೃತ್ತದವರೆಗೆ ಸ್ಟೆತಸ್ಕೋಪ್, ರೆಫ್ರಾನ್ ತೊಡಿಸಿದ್ದ ಅಣಕು ಶವವನ್ನು ಹೊತ್ತು ಸಾಗಿದ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು, ನಮ್ಮ ಬದುಕು ಹೀಗಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಕಣ್ಣು, ಕಿವಿ, ಬಾಯಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಸರ್ಕಾರವನ್ನು ಪ್ರತಿಬಿಂಬಿಸಲಾಯಿತು.
ಕಿಮ್ಸ್ ಕಿರಿಯ ವೈದ್ಯರ ಸಂಘದ ಅಧ್ಯಕ್ಷ ಡಾ. ಸುಹಾಸ ಎಸ್.ಟಿ. ಮಾತನಾಡಿ, ಸರ್ಕಾರ ರಾಜ್ಯದಲ್ಲಿ ನಿರುದ್ಯೋಗಿಗಳಿಗೆ 3 ಸಾವಿರ ರೂ. ನೀಡುತ್ತಿದೆ. ಆದರೆ ವೈದ್ಯ ವೃತ್ತಿ ಸಲ್ಲಿಸುತ್ತಿರುವ ನಮಗೆ ಸ್ಟೈಫಂಡ್ ಹೆಚ್ಚಳ ಮಾಡುತ್ತಿಲ್ಲ. ವೈದ್ಯರಿಗೆ ಯಾವುದೇ ರೀತಿಯ ಸುರಕ್ಷತೆ ಇಲ್ಲ. ಈ ಬಗ್ಗೆ ಹಲವು ಬಾರಿ ಹೋರಾಟ ಮಾಡಿದ್ದೇವೆ. ಆದರೂ ಕ್ಯಾರೆ ಎನ್ನುತ್ತಿಲ್ಲ. ಕೂಡಲೇ ನಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲವಾದಲ್ಲಿ ಇನ್ನಷ್ಟು ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ರಾಜ್ಯ ಸಂಚಾಲಕ ಡಾ. ಆದರ್ಶ ಇ.ಎಚ್., ಪ್ರಧಾನ ಕಾರ್ಯದರ್ಶಿ ಡಾ. ಆದರ್ಶಾ ವಿ., ಉಪಾಧ್ಯಕ್ಷೆ ಡಾ. ಹರ್ಷಿತಾ, ಡಾ. ದೀಕ್ಷಂತ್, ಡಾ. ಸುನಿಲ್ ಆರ್., ಡಾ. ಶಶಾಂಕ, ಡಾ. ರಕ್ಷಿತ್ ಎಂ.ಸಿ., ಡಾ. ಉಷಾ ಎಸ್.ವಿ., ಡಾ. ಯತೀಶ ಕೆ.ಪಿ., ಡಾ. ಸುನಿಲ್ ಆರ್, ಡಾ. ಆಶಾ ಎ.ಎಂ., ಡಾ. ಅಭಿಜಿತ್ ಬಾಪೂರಾಂ ಇತರರು ಇದ್ದರು.