

ಬೆಂಗಳೂರು: ಮೇಲ್ಮನೆ ಪ್ರತಿಪಕ್ಷ ನಾಯಕ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಇಂದು(ಶನಿವಾರ) ಅಧಿಕೃತವಾಗಿ ಕಾಂಗ್ರೆಸ್ಗೆ ಗುಡ್ ಬೈ ಹೇಳಿದ್ದಾರೆ.
ರಾಜೀನಾಮೆ ನಿಡುವ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರ ಆಪ್ತ ಇಬ್ರಾಹಿಂ, ಇಂದೇ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಮತ್ತು ಎಂಎಲ್ಸಿ ಸ್ಥಾನಕ್ಕೂ ರಾಜೀನಾಮೆ ಕೊಡುವೆ. ನನ್ನ ರಾಜೀನಾಮೆ ಪತ್ರವನ್ನು ಸಿದ್ದರಾಮಯ್ಯಗೆ ಕೊಡುತ್ತಿರುವೆ. ಅಂಗೀಕಾರ ಮಾಡುವುದು, ಬಿಡುವುದು ಅವರಿಷ್ಟ. ರಾಜೀನಾಮೆ ಪತ್ರವನ್ನು ಸೋನಿಯಾ ಗಾಂಧಿ ಅವರಿಗೂ ತಲುಪಿಸುತ್ತಿದ್ದೇನೆ. ಅನೇಕರು ರಾಜೀನಾಮೆ ನೀಡಿ ನನ್ನ ಜತೆ ಬರ್ತಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಿಕೆಶಿ, ಸಿದ್ದರಾಮಯ್ಯ ಹಾಗೂ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದಗಳು ಎನ್ನುತ್ತಲೇ ಜೆಡಿಎಸ್ ಪಕ್ಷಕ್ಕೆ ಸೇರುವುದಾಗಿ ಘೋಷಿಸಿದರು.