ಕುಮಾರಸ್ವಾಮಿಯನ್ನು ಹಾಡಿಹೊಗಳುತ್ತಲೇ ಜೆಡಿಎಸ್​ ಪಕ್ಷದ ಉಳಿವಿಗೆ ಮಹತ್ತರ ಸಲಹೆ ಕೊಟ್ಟ ಜಿಟಿಡಿ!

hdk- gtd
Published on

ಬೆಂಗಳೂರು: ಜೆಡಿಎಸ್​ ತೊರೆದು ಕಾಂಗ್ರೆಸ್​ ಸೇರುವ ತವಕದಲ್ಲಿದ್ದ ಶಾಸಕ ಜಿ.ಟಿ.ದೇವೇಗೌಡರು ಇದೀಗ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರನ್ನ ಹಾಡಿಹೊಗಳುವ ಮೂಲಕ ಮೈಸೂರು ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ.

ಗ್ರಾಮ ವಾಸ್ತವ್ಯದ ಮೂಲಕ ನಾಡಿನಲ್ಲಿ ಹೆಸರುವಾಸಿ ಆದವರು ಎಚ್‌.ಡಿ.ಕುಮಾರಸ್ವಾಮಿ. ಸಿಕ್ಕ ಕಡಿಮೆ ಅವಧಿಯಲ್ಲೇ ಉತ್ತಮ ಅಭಿವೃದ್ಧಿ ಮಾಡಿದ್ದಾರೆ. ರೈತರ ಸಾಲಾ ಮನ್ನ ಮಾಡಿದ್ದಾರೆ. ಕುಮಾರಸ್ವಾಮಿ ಅವರು ನನಗೆ ಅಧಿಕಾರ ಕೊಟ್ಟ 8 ತಿಂಗಳು ಉತ್ತಮ ಕೆಲಸ ಮಾಡಿದ್ದೇನೆ. ಜನತಾ ಪಕ್ಷವನ್ನು ಉಳಿಸಿ ಬೆಳಸುವ ಜವಾಬ್ದಾರಿ ಕುಮಾರಸ್ವಾಮಿ ಮೇಲಿದೆ ಎಂದು ಜಿಟಿಡಿ ಹೇಳಿದರು.

ಹುಣಸೂರು ತಾಲೂಕು ಒಕ್ಕಲಿಗ ಸಂಘ ಶುಕ್ರವಾರ ಆಯೋಜಿಸಿದ್ದ ಕೆಂಪೇಗೌಡರ 513ನೇ ಜಯಂತಿ ಕಾರ್ಯಕ್ರಮದಲ್ಲಿ ಜಿಟಿಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಆದಿ ಚುಂಚನಗಿರಿ ಮಠಾಧೀಶ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಮಾಜಿ ಸಿಎಂ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​, ಶಾಸಕ ಜಿಟಿ.ದೇವೇಗೌಡ, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಹರೀಶ್‌ಗೌಡ, ಶಾಸಕ ಸಾರಾ.ಮಹೆಶ್, ಎಂಎಲ್​ಸಿಗಳಾದ ಎಚ್.ವಿಶ್ವನಾಥ್, ಮಂಜೇಗೌಡ ಮುಖಂಡರು ಪಾಲ್ಗೊಂಡಿದ್ದರು. ಭಾಷದ ಆರಂಭದಲ್ಲೇ ಕುಮಾರಸ್ವಾಮಿಯನ್ನು ಹಾಡಿಹೊಗಳಿದ ಜಿ.ಟಿ.ದೇವೇಗೌಡ, ಸೀಮೆಎಣ್ಣೆಯ ಡಬ್ಬವನ್ನು ತಲೆ ಮೇಲೆ ಇಟ್ಟುಕೊಂಡು ಮಾಜಿ ಪ್ರಧಾನಿ ದೇವೇಗೌಡರು ಪ್ರತಿಭಟನೆ ಮಾಡಿದ್ದಾರೆ. ದೇವೇಗೌಡ, ಎಸ್‌.ಎಂ.ಕೃಷ್ಣ, ಯಡಿಯೂರಪ್ಪ ಅವರ ಪ್ರಯತ್ನದಿಂದ ಏರ್‌ಪೋರ್ಟ್​ಗೆ ಕೆಂಪೇಗೌಡರ ಹೆಸರು ಬಂತು. ಎಸ್‌.ಎಂ.ಕೃಷ್ಣ ಬೆಂಗಳೂರನ್ನು ಐಟಿಬಿಟಿ ನಗರ ಮಾಡಿದ್ರು. ಇವತ್ತಿನವರೆಗೆ ನಾನು ಕುಮಾರಸ್ವಾಮಿ ಜೊತೆ ಮಾತಾನಡಿರಲಿಲ್ಲ. ಸ್ವಾಮೀಜಿಗಳು ನೀವು ಒಟ್ಟಿಗೆ ಇರಬೇಕು ಎಂದು ಹೇಳಿದ್ದಾರೆ. ಒಬ್ಬರು ಗಟ್ಟಿಯಾಗಿ ನಿಲ್ಲಬೇಕು ಅಂದ್ರು. ಹುಣಸೂರು ಜನರೇ ನಮ್ಮನ್ನು ಒಟ್ಟಾಗಿ ಸೇರಿಸಿದ್ದಾರೆ ಎಂದರು.

ವಿಶ್ವನಾಥ್‌ಗೆ ಹುಣಸೂರು ಕ್ಷೇತ್ರದ ಟಿಕೇಟ್ ಕೊಟ್ಟಾಗಲೂ ನಾನು ಹರೀಶ್‌ಗೌಡಗೆ ಟಿಕೇಟ್ ಕೇಳಿರಲಿಲ್ಲ. ಕುಮಾರಸ್ವಾಮಿ ನನಗೆ ಅಧಿಕಾರ ಕೊಟ್ಟ 8 ತಿಂಗಳು ಉತ್ತಮ ಕೆಲಸ ಮಾಡಿದ್ದೇನೆ. ಜನತಾ ಪಕ್ಷ ಉಳಿಸಿ ಬೆಳಸುವ ಜವಾಬ್ದಾರಿ ಕುಮಾರಸ್ವಾಮಿ ಮೇಲಿದೆ. ಇದು ಜಯಪ್ರಕಾಶ್ ನಾರಾಯಣ್ ಕಟ್ಟಿದ ಪಕ್ಷ. ಈ ಪಕ್ಷವನ್ನು ಎಚ್‌.ಡಿ.ದೇವೇಗೌಡರು ಕಷ್ಟಪಟ್ಟು ಉಳಿಸಿದ್ದಾರೆ. 90ನೇ ವಯಸ್ಸಿನಲ್ಲೂ ದೇವೇಗೌಡರು ಚಿಂತೆ ಮಾಡುತ್ತಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯವಾಗಿ ಕಟ್ಟಿದ ಈ ಪಕ್ಷವನ್ನು ನೀವು(ಕುಮಾರಸ್ವಾಮಿ) ಉಳಿಸಿಕೊಳ್ಳಬೇಕು. ಆ ಶಕ್ತಿಯನ್ನು ತಾಯಿ ಚಾಮುಂಡೇಶ್ವರಿ ನಿಮಗೆ(ಕುಮಾರಸ್ವಾಮಿ) ಕೊಡಲಿ ಎಂದ ಶಾಸಕ ಜಿ.ಟಿ.ದೇವೇಗೌಡ ಆಶಿಸಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net