ಕಣ್ಣಿಲ್ಲದ ವೃದ್ಧೆಯ ಕಷ್ಟಕ್ಕೆ ಮರುಗಿದ ಶಾಸಕ: ಅಳಲು ತೋಡಿಕೊಂಡ ಎರಡೇ ದಿನದಲ್ಲಿ ಅಜ್ಜಿಗೆ ಶಾಸಕ ಮಾಡಿದ್ದೇನು ಗೊತ್ತಾ?

New Project(11)
Published on

ವಿಜಯಪುರ: ‘ಸಾಹೇಬ್ರ ನನಗೆ ಎರಡೂ ಕಣ್ಣು ಕಾಣಲ್ಲರೀ, ವಯಸ್ಸಾಗೇದ, ನೋಡಿಕೊಳ್ಳೋರು ಯಾರೂ ಇಲ್ಲ, ಹೆಂಗಾರ ಮಾಡಿ ಪಿಂಚಣಿ ಕೊಡಿಸಿ ಪುಣ್ಯ ಕಟ್ಟಿಕೊಳ್ರೀ ಯಪ್ಪಾ...’ ಎಂದು ಅಂಗಲಾಚಿದ್ದ ವೃದ್ಧೆಗೆ ಎರಡೇ ದಿನದಲ್ಲಿ ಪಿಂಚಣಿ ಸೌಲಭ್ಯ ಕಲ್ಪಿಸಿ ಮಂಜೂರಾತಿ ಆದೇಶ ನೀಡುವ ಮೂಲಕ ಶಾಸಕ ಡಾ.ದೇವಾನಂದ ಚವಾಣ್ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇಲ್ಲಿನ ಕೆಎಚ್‌ಬಿ ಕಾಲನಿಯಲ್ಲಿರುವ ತಮ್ಮ ಸ್ವಗೃಹದಲ್ಲಿ ಆ.23 ರಂದು ಶಾಸಕ ದೇವಾನಂದ ಚವಾಣ್ ಜನಸಂಪರ್ಕ ಸಭೆ ನಡೆಸಿದ್ದರು. ಈ ವೇಳೆ ಕೈಯಲ್ಲಿ ಕೋಲು ಹಿಡಿದು ಬಂದಿದ್ದ ವೃದ್ಧೆ ಉಮಾಬಾಯಿ ಈರಯ್ಯ ವಸ್ತ್ರದ, ತಮಗೆ ಹೇಗಾದರೂ ಮಾಡಿ ಪಿಂಚಣಿ ಕೊಡಿಸಿ ಎಂದು ಅಂಗಲಾಚಿದ್ದರು. ವೃದ್ಧೆಯ ಸ್ಥಿತಿಗೆ ಮರುಗಿದ್ದ ಶಾಸಕರು ಅಧಿಕಾರಿಗಳನ್ನು ಕರೆಯಿಸಿ ತರಾಟೆಗೆ ತೆಗೆದುಕೊಂಡಿದ್ದರು.

ಶುಕ್ರವಾರ ತಾವೇ ಖುದ್ದಾಗಿ ಅಜ್ಜಿಯ ಮನೆಗೆ ಹೋಗಿ ಸಂಧ್ಯಾ ಸುರಕ್ಷಾ ಯೋಜನೆಯಡಿ ಮಂಜೂರಿಸಿದ ಪಿಂಚಣಿಯ ಪ್ರತಿ ನೀಡಿದರು. ಮಾತ್ರವಲ್ಲ ಉಪಜೀವನಕ್ಕೆ ವೈಯಕ್ತಿಕ ಧನಸಹಾಯ ಮಾಡಿದರು. ಶಾಸಕರ ಕಾರ್ಯಕ್ಕೆ ವೃದ್ಧೆ ಉಮಾಬಾಯಿ ಕಂಬನಿಗರಿದರಲ್ಲದೇ ಶಾಸಕರಿಗೆ ಮನಃತುಂಬಿ ಹರಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net