ನಿನ್ಗೆ ಮಾನ-ಮರ್ಯಾದೆ ಇದ್ಯಾ? ನಾಚಿಕೆ ಆಗಲ್ವಾ?... ಮಹಿಳೆ ವಿರುದ್ಧ ಅರವಿಂದ ಲಿಂಬಾವಳಿ ಗರಂ, ವಿಡಿಯೋ ವೈರಲ್​

aravind limbavali
Published on

ಬೆಂಗಳೂರು: ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದ ಶಾಸಕ ಅರವಿಂದ ಲಿಂಬಾವಳಿ ಅವರು ಮಹಿಳೆಯೊಬ್ಬರ ಮೇಲೆ ದರ್ಪ ತೋರಿದ್ದಾರೆ. 'ನಿಂಗೆ ಮಾನ-ಮರ್ಯಾದೆ ಇದ್ಯಾ? ನಾಚಿಕೆ ಆಗಲ್ವಾ?' ಎಂದು ಮಹಿಳೆಗೆ ಅವಾಜ್​ ಹಾಕಿದ್ದಾರೆ. ಅಷ್ಟೇ ಅಲ್ಲ, 'ಏಯ್​ ಪೊಲೀಸ್​ ಸ್ಟೇಷನ್​ಗೆ ಕರ್ಕೊಂಡ್​ ಹೋಗಿ' ಎಂದು ಸ್ಥಳದಲ್ಲಿದ್ದ ಅಧಿಕಾರಿಗೆ ತಾಕೀತು ಮಾಡಿದ್ದಾರೆ.

ಇತ್ತಿಚೀಗೆ ಬೆಂಗಳೂರಲ್ಲಿ ಸುರಿದ ಧಾರಾಕಾರ ಮಳೆಗೆ ಹಲೆವಡೆ ಸಮಸ್ಯೆ ಉಂಟಾಗಿದೆ. ಮಹದೇವಪುರ ಕ್ಷೇತ್ರ ವ್ಯಾಪ್ತಿಯ ಹಲವೆಡೆ ಪ್ರವಾಹ ಸ್ಥಿತಿ ಉಂಟಾಗಿತ್ತು. ಗುರುವಾರ ನಲ್ಲೂರಹಳ್ಳಿಯ ವೈಟ್​ಫೀಲ್ಡ್​​ ಕೋಡಿ ಸರ್ಕಲ್​ ಬಳಿ ರಾಜಕಾಲುವೆ ಒತ್ತುವರಿ ಆಗಿರುವ ಸ್ಥಳಕ್ಕೆ ಶಾಸಕರು ಭೇಟಿ ನೀಡಿದ್ದರು. ಈ ವೇಳೆ ಸ್ಥಳೀಯ ಮಹಿಳೆಯೊಬ್ಬರು ಕೈಯಲ್ಲಿ ಕೆಲ ಪತ್ರಗಳನ್ನು ಹಿಡಿದುಕೊಂಡು ಆಗಮಿಸಿ ಅಳಲು ತೋಡಿಕೊಳ್ಳಲು ಯತ್ನಿಸುತ್ತಿದ್ದರು. 'ಸರ್..​ ಸರ್..' ಎನ್ನುತ್ತಾ ಸಮಸ್ಯೆ ಹೇಳಿಕೊಳ್ಳಲು ಮುಂದಾದ ಮಹಿಳೆ ಅವಾಜ್​ ಹಾಕಿದ ಶಾಸಕರು, ಆಕೆಯ ಕೈಯಿಂದ ದಾಖಲೆ ಪತ್ರ ಕಸಿದುಕೊಳ್ಳಲು ಯತ್ನಿಸಿದ್ದಲ್ಲದೆ, 'ಪೊಲೀಸ್​ ಸ್ಟೇಷನ್​ಗೆ ಕರೆದುಕೊಂಡು ಹೋಗಿ ಕೂರಿಸಿ' ಎಂದಿದ್ದಾರೆ.

'ಒತ್ತುವರಿ ಮಾಡ್ಕೊಂಡು ನ್ಯಾಯ ಕೇಳೋಕೆ ಬರ್ತೀಯಾ? ನಿಂಗೆ ಮಾನ ಮರ್ಯಾದೆ ಇದ್ಯಾ? ನಾಚಿಕೆ ಆಗಲ್ವಾ? ಒತ್ತುವರಿ ಮಾಡಿಕೊಳ್ವಾಗ ಚಂದೋ... ನನಗೂ ಬೇರೆ ಭಾಷೆ ಬರುತ್ತೆ...' ಎಂದು ಜೋರು ಧ್ವನಿಯಲ್ಲೇ ಶಾಸಕರು ದರ್ಪದಿಂದ ವರ್ತಿಸಿದ್ದಾರೆ. ಅಷ್ಟೇ ಅಲ್ಲ ಮಹಿಳೆಯ ಕೈಯಲ್ಲಿ ಕಾಗದ ಪತ್ರಗಳನ್ನು ಕಿತ್ತುಕೊಳ್ಳೋಕು ಯತ್ನಿಸಿದ್ದಾರೆ. 'ಸರ್​, ಮರ್ಯಾದೆಯಿಂದ ಮಾತಾಡಿ. ಹೆಣ್ಣುಮಕ್ಕಳು ಅನ್ನುವ ಗೌರವ ಇರಲಿ. ನೀವು ನನಗೂ ಎಂಎಲ್​ಎ. ಎಲ್ಲರಿಗೂ ಶಾಸಕರು. ನಾನು ಒತ್ತುವರಿ ಮಾಡಿಕೊಂಡಿಲ್ಲ. ದಾಖಲೆ ಇದೆ ನೋಡಿ' ಎಂದು ಮಹಿಳೆ ಹೇಳಿದರೂ 'ಇವಳಿಗೆ ಮರ್ಯಾದೆ ಬೇರೆ ಕೇಡು ಒಳಗೆ ಹಾಕಿ' ಎಂದು ಪೊಲೀಸರಿಗೆ ಶಾಸಕರು ಸೂಚಿಸಿದ್ದಾರೆ. ಅಷ್ಟೇ ಅಲ್ಲ, ಆ ಪತ್ರವನ್ನೂ ಮಹಿಳೆ ಕೈಯಿಂದ ಕಿತ್ತುಕೊಂಡಿದ್ದಾರೆ.

ಈ ವಿಡಿಯೋ ವೈರಲ್​ ಆಗಿದ್ದು, ಸಾರ್ವಜನಿಕರು ಶಾಸಕರ ನಡೆಯನ್ನ ಖಂಡಿಸಿದ್ದಾರೆ. ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆ ಬಳಿ ಅರವಿಂದ್ ಲಿಂಬಾವಳಿ ತೋರಿದ ದರ್ಪವನ್ನು ಟೀಕಿಸಿದ್ದಾರೆ. ಇವ್ರೇನಾ ನಮ್ಮ ಜನಪತ್ರಿನಿಧಿಗಳು? ಅದ್ಹೇನೆ ಇರಲಿ ಮೊದಲು ಸಮಸ್ಯೆ ಆಲಿಸಿ ನಂತರ ತಪ್ಪಿದ್ದರೆ ಕಾನೂಕು ಕ್ರಮ ಕೈಗೊಳ್ಳಬಹುದು. ಆದರೆ ಅಧಿಕಾರ ಇದೆ ಎಂದು ಮನವಿ ಕೊಡಲು ಬಂದವರನ್ನೂ ಪೊಲೀಸ್​ ಸ್ಟೇಷನ್​ನಲ್ಲಿ ಕೂರಿಸ್ತಾರಾ? ಎಂದು ಸಾಮಾಜಿಕ ಜಾಲತಾಣದಲ್ಲಿ ಶಾಸಕರನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net