ರಾಜ್ಯದಲ್ಲಿ ಕೈ ತಪ್ಪಿದ ಹೂಡಿಕೆ

27 vikram 5 (Aravind bellad)
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಇಲೆಕ್ಟ್ರಿಕ್​ ವಾಹನಗಳ ಚಾರ್ಜಿಂಗ್​ಗೆ ಸಂಬಂಧಿಸಿದ ದೇಶದ ಅತಿ ದೊಡ್ಡ ನೆಟ್ವರ್ಕ್​ ಸಂಸ್ಥೆ ಏಥರ್​ ಎನರ್ಜಿ ರಾಜ್ಯದಲ್ಲಿ ಬಂಡವಾಳ ಹೂಡಿಕೆಯಿಂದೆ ಹಿಂದೆ ಸರಿದು ಮಹಾರಾಷ್ಟ್ರಕ್ಕೆ ಹೋಗಿದ್ದು, ಇದರಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಏಥರ್​ ಎನರ್ಜಿ ಕಂಪನಿ ರಾಜ್ಯದಲ್ಲಿ ಸುಮಾರು 2,000 ಕೋಟಿ ರೂ. ಹೂಡಿಕೆ ಮಾಡಿ 4,000ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಲು ಆಸಕ್ತಿ ತೋರಿತ್ತು. ಆದರೆ ರಾಜ್ಯ ಸರ್ಕಾರ ಸ್ಪಂದಿಸದ ಕಾರಣ ತನ್ನ ಘಟಕವನ್ನು ಮಹಾರಾಷ್ಟ್ರದಲ್ಲಿ ಸ್ಥಾಪಿಸುತ್ತಿದೆ. ಇದರಿಂದ ರಾಜ್ಯದಲ್ಲಿ ಹೂಡಿಕೆ ಮತ್ತು ಜನರಿಗೆ ಉದ್ಯೋಗ ಅವಕಾಶ ತಪ್ಪಿದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಏಥರ್​ ಎನರ್ಜಿ ಬೆಂಗಳೂರಿನಲ್ಲಿ ಕೇಂದ್ರ ಸ್ಥಾನ ಹೊಂದಿರುವ ಕಂಪನಿ. ರಾಜ್ಯದಲ್ಲಿ ಬಂಡವಾಳ ಹೂಡಲು ಅವಕಾಶವಿದ್ದರೂ ಸರ್ಕಾರ ಕಂಪನಿ ಜತೆಗೆ ಮಾತುಕತೆ ನಡೆಸಿ ಹೂಡಿಕೆಗೆ ಮನ ವೊಲಿಸುವಲ್ಲಿ ವಿಫಲವಾಗಿದೆ. ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕಂಪನಿಯು ಕರ್ನಾಟಕದ ಬದಲು ಮಹಾರಾಷ್ಟ್ರದಲ್ಲಿ ಬೃಹತ್​ ಪ್ರಮಾಣದಲ್ಲಿ ಹೂಡಿಕೆಗೆ ಮುಂದಾಗಿದೆ. ಕಾಂಗ್ರೆಸ್​ ಸರ್ಕಾರ ಬಂಡವಾಳ ಹೂಡಿಕೆ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಹೂಡಿಕೆದಾರರ ಬಗ್ಗೆ ಗಮನಹರಿಸುತ್ತಿಲ್ಲ ಎಂಬುದನ್ನು ತೋರುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಪನಿ ಜತೆ ಮಾತುಕತೆ ನಡೆಸುವಲ್ಲಿ ವಿಫಲರಾಗಿದ್ದಾರೆ ಎಂದರು.
ರಾಜ್ಯದ ಸರ್ಕಾರ ಇನ್ನಾದರೂ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಹೆಚ್ಚಿಸಲು, ಕಂಪನಿಗಳನ್ನು ಆಕಷಿರ್ಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಇತರ ಕಂಪನಿಗಳೂ ರಾಜ್ಯದಿಂದ ಹಿಂದೆ ಸರಿಯುವ ಸ್ಥಿತಿ ಎದುರಾಗಬಹುದು. ಇದು ರಾಜ್ಯದ ಅಭಿವೃದ್ಧಿ ಮೇಲೆ ಪರಿಣಾಮ ಬೀರಲಿದೆ. ರಾಜ್ಯಕ್ಕೆ ಹೂಡಿಕೆ ಮಾಡಲು ಮುಂದಾಗುವ ಕಂಪನಿಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಗುಜರಾತ್​ನತ್ತ ಸೆಳೆಯುತ್ತಿದ್ದಾರೆ ಎನ್ನುವ ಆರೋಪ ಮಾಡುವ ಕಾಂಗ್ರೆಸ್​ ನಾಯಕರು ಮೊದಲು ತಮಗೆ ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಲಿ ಎಂದು ಟೀಕಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net