

ಶನಿವಾರಸಂತೆ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆ, ಗಾಳಿಗೆ ಶನಿವಾರಸಂತೆ ವ್ಯಾಪ್ತಿಯಲ್ಲಿ ಮರ, ವಿದ್ಯುತ್ ಕಂಬಗಳು ಧರೆಗುರುಳಿರುಳಿವೆ.
ಶನಿವಾರಸಂತೆ ವ್ಯಾಪ್ತಿಯಲ್ಲಿ ಸುರಿದ ಭಾರಿ ಮಳೆ, ಗಾಳಿಗೆ ಬುಧವಾರ ಮಾಲಂಬಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೆಂಚುಗಳು ಹಾರಿ ಹೋಗಿವೆ. ಒಂದು ವಾರದಿಂದ ಭಾರಿ ಮಳೆಯಾಗುತ್ತಿದ್ದು, ಮಾಲಂಬಿ ಶಾಲಾ ಹಿಂಭಾಗದ ಗೋಡೆ ಮಳೆಗೆ ಸೋರುತ್ತಿದೆ. ಇದರಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಆತಂಕ ಎದುರಿಸುತ್ತಿದ್ದಾರೆ. ಬುಧವಾರ ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಅನಾಹುತ ತಪ್ಪಿದಂತಾಗಿದೆ. ಇದೇ ರೀತಿಯಲ್ಲಿ ಮಳೆಯಾದರೆ ಶಾಲಾ ಕಟ್ಟಡ ನೆಲಕ್ಕುರುಳುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತ ಪಡಿಸಿದ್ದಾರೆ.