

ಬೇಲೂರು: ಅನ್ನಭಾಗ್ಯ ಯೋಜನೆಯಡಿ ಸರ್ಕಾರ ಬಡವರಿಗೆ ವಿತರಿಸುತ್ತಿರುವ ಪಡಿತರ ಪಡೆಯಲು ಗ್ರಾಹರು ಸರ್ವರ್ ಸಮಸ್ಯೆಯಿಂದ ದಿನನಿತ್ಯ ಕೆಲಸ ಕಾರ್ಯ ಬಿಟ್ಟು ನ್ಯಾಬೆಲೆ ಅಂಗಡಿಗೆ ಅಲೆಯುವ ಸ್ಥಿತಿ ನಿರ್ಮಾಣವಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಶೀಘ್ರವೇ ಸರ್ವರ್ ಸಮಸ್ಯೆ ನಿವಾರಿಸಿ ಅನುಕೂಲ ಕಲ್ಪಿಸಬೇಕೆಂದು ಅರೇಹಳ್ಳಿ ಸೇರಿದಂತೆ ಇನ್ನಿತರೆ ಗ್ರಾಮಗಳ ಗ್ರಾಹಕರು ಆಗ್ರಹಿಸಿದ್ದಾರೆ.
ತಾಲೂಕಿನ ಅರೇಹಳ್ಳಿಯ ಸಂತೋಷ್ ನಗರದ ನಿವಾಸಿ ವಸಂತ್ ಮಾತನಾಡಿ, ಪಡಿತರ ವಿತರಣೆ ಸಂದರ್ಭ ಸರ್ವರ್ ಸಮಸ್ಯೆ ಉಂಟಾಗುತ್ತಿರುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಅರೇಹಳ್ಳಿ ಭಾಗದಲ್ಲಿ ಬಹುತೇಕ ಕೂಲಿ ಕಾರ್ಮಿಕರೇ ವಾಸವಿದ್ದಾರೆ. ಆದರೆ ಅವರು ಪಡಿತರ ಪಡೆಯಬೇಕೆಂದರೆ ಕೂಲಿ ಕೆಲಸ ಬಿಟ್ಟು ಪಡಿತರಕ್ಕಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಜತೆಗೆ ಬೆಳಗ್ಗೆಯಿಂದ ನ್ಯಾಯಬೆಲೆ ಅಂಗಡಿ ಮುಂದೆ ಸಾಲುಗಟ್ಟಿ ನಿಂತರೂ ಸರ್ವರ್ ಸಮಸ್ಯೆಯಿಂದ ತಂಬಿಂಗ್ ಕೊಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಕೂಲಿ ಕಾರ್ಮಿಕರು ಪರದಾಡುವಂತಾಗಿದೆ. ಈಗ ಹೆಚ್ಚು ಮಳೆ ಬರುತ್ತಿರುವುದರಿಂದ ಗ್ರಾಹಕರು ಏನೂ ಮಾಡಲು ತೋಚದಂತಾಗಿದ್ದು, ತಹಸೀಲ್ದಾರ್, ಆಹಾರ ಇಲಾಖೆ ಅಧಿಕಾರಿಗಳು ಪಡಿತರ ವಿತರಣೆಯಲ್ಲಾಗುತ್ತಿರುವ ಸಮಸ್ಯೆ ಬಗೆಹರಿಸಿ ಬಡವರಿಗೆ ಅನುಕೂಲ ಕಲ್ಪಿಸಬೇಕಿದೆ ಎಂದು ಒತ್ತಾಯಿಸಿದರು.
ಗ್ರಾಹಕ ಚಿತ್ರ ಭೂಪಾಲ್ ಮಾತನಾಡಿ, ಬಡವರಾದ ನಾವು ನಾವು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಪಡಿತರಕ್ಕಾಗಿ ಬೆಳಗ್ಗೆಯಿಂದಲೇ ಅಂಗಡಿ ಮುಂದೆ ಕಾದು ಕಾದು ಸುಸ್ತಾಗಿದ್ದೇವೆ. ಪಡಿತರ ವಿತರಣೆಯಲ್ಲಾಗಿರುವ ಸರ್ವರ್ ಸಮಸ್ಯೆಯಿಂದ ಕೂಲಿ ಕೆಲಸಕ್ಕೆ ಹೋಗದೇ ಕಾಯುವಂತಾಗಿದೆ. ದಯಮಾಡಿ ತಕ್ಷಣವೇ ಕೂಲಿ ಕಾರ್ಮಿಕರಿಗೆ ಪಡಿತರ ಸಿಗುವಂತೆ ಮಾಡಿಕೊಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಲ್ಲಿ ಮನವಿ ಮಾಡುತ್ತೇನೆ ಎಂದರು.
ಅರೇಹಳ್ಳಿ ಗ್ರಾಮಸ್ಥರಾದ ಪುನೀತ್, ಗೋಪಾಲ್ ಪೂಜಾರಿ, ಪ್ರಜ್ವಲ್, ಕಾರ್ತಿಕ್, ಪುಷ್ಪ, ಶಾಂತಮ್ಮ, ಸುಲೋಚನ, ಶಿವಲೀಲ ಇತರರು ಪಡಿತರ ವಿತರಣೆ ಸಮಸ್ಯೆಗಳು ಅಲವತ್ತುಕೊಂಡರು.
ಬೇಲೂರು ತಾಲೂಕಿನ ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆ ಕಾಡುತ್ತಿದೆ. ಇದರಿಂದ ಬಡವರು, ನಿರ್ಗತಿಕರು ಸರ್ಕಾರದ ಅನ್ನಭಾಗ್ಯ ಯೋಜನೆಯ ಪಡಿತರ ಪಡೆಯಲು ಪರದಾಡುವಂತಾಗಿದೆ. ಕೆಲವು ಸಮಯ ಸರ್ವರ್ ಸಮಸ್ಯೆ ಕಾರಣ ಕೆಲವರು ಆಯಾ ತಿಂಗಳ ಪಡಿತರ ಪಡೆಯಲಾಗದೇ ಅಂಗಡಿಯವರಿಗೆ ಶಾಪ ಹಾಕಿಕೊಂಡು ಹೋಗುವಂತಹ ಘಟನೆಗಳು ಸಾಮಾನ್ಯವಾಗಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ಸರ್ವರ್ ಸಮಸ್ಯೆ ನಿವಾರಿಸಿ ಬಡವರಿಗೆ ಸರ್ಕಾರದ ಅನ್ನಭಾಗ್ಯ ಯೋಜನೆಯ ಪಡಿತರ ಸಿಗುವಂತೆ ಮಾಡಬೇಕಿದೆ. ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿ ಹಾಗೂ ತಾಲೂಕು ಕಚೇರಿ ಮುಂದೆ ಪ್ರತಿಭಟನಡೆ ನಡೆಸಲಾಗುವುದು.
* ಎಂ.ಕೆ.ಆರ್.ಸೋಮೇಶ್, ಜಿಲ್ಲಾಧ್ಯಕ್ಷ ಜಯ ಕರ್ನಾಟಕ ಸಂಘಟನೆ, ಬೇಲೂರು