

ಹನೂರು: ತಹಸೀಲ್ದಾರ್ ಕಚೇರಿಯ ಆವರಣದಲ್ಲಿರುವ ಅಭಿಲೇಖಾಲಯ ಕಚೇರಿಯಲ್ಲಿ (ರೆಕಾರ್ಡ್ ರೂಮ್) ಸೋಮವಾರ ತಡರಾತ್ರಿ ಬಾಗಿಲಿನ ಬೀಗ ಮುರಿದು ದುಷ್ಕರ್ಮಿ ಒಳನುಗ್ಗಿ ಜಾಲಾಡಿದ್ದು, ದಾಖಲೆ ಕಳ್ಳತನವಾಗಿರುವ ಶಂಕೆ ವ್ಯಕ್ತವಾಗಿದೆ.
ಗ್ರಂಥಾಲಯ ಕಚೇರಿಗೆ ಹೊಂದಿಕೊಂಡಂತಿರುವ ಅಭಿಲೇಖಾಲಯ ಕಚೇರಿಯಲ್ಲಿ ಭೂ ದಾಖಲೆಗಳನ್ನು ಇರಿಸಲಾಗಿತ್ತು. ನಸುಕಿನ ಅಂದಾಜು 2.30ರ ಹೊತ್ತಿಗೆ ಮುಖವಾಡ ಧರಿಸಿ ಒಳನುಗ್ಗಿದ ದುಷ್ಕರ್ಮಿಯೊಬ್ಬ ದಾಖಲೆಗಳನ್ನು ಪರಿಶೀಲಿಸಿ ಹುಡುಕಾಟ ನಡೆಸಿದ್ದಾನೆ. ಈ ಬಗ್ಗೆ ಸಿಸಿ ಕ್ಯಾಮರಾದಲ್ಲಿ ದೃಶ್ಯಾವಳಿ ಸೆರೆಯಾಗಿದೆ. ಆದರೆ ವ್ಯಕ್ತಿಯ ಗುರುತು ತಿಳಿದುಬಂದಿಲ್ಲ. ದಾಖಲೆಗಳನ್ನು ನಾಶಪಡಿಸುವ ಉದ್ದೇಶದಿಂದ ಈ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಹಾಗಾಗಿ ದಾಖಲೆಗಳು ಕಳ್ಳತನವಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಈ ಸಂಬಂಧ ಮಂಗಳವಾರ ತಹಸೀಲ್ದಾರ್ ನೀಡಿದ ದೂರಿನ ಮೇರೆಗೆ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ಪ್ರಸಾದ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಜಿಲ್ಲಾ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಸಿ ಕ್ಯಾಮರಾ ಫುಟೇಜ್‌ಅನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.