

ನೆಲಮಂಗಲ: ಬಾಲಕಿ ಬಳಿ ಅಸಭ್ಯವಾಗಿ ವರ್ತಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಕೋಪಗೊಂಡ ವ್ಯಕ್ತಿ ಬಾಲಕಿಯನ್ನು ಇರಿದು ಕೊಲೆ ಮಾಡಿ ತಾನೂ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರ ಸಮೀಪದ ಜಿಂದಾನ್ ನಗರದಲ್ಲಿ ಭಾನುವಾರ ನಡೆದಿದೆ.
ಮೂಲತಃ ಉತ್ತರಾಖಂಡ ಮೂಲದ, ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿ ಜಿಂದಾನ್ ನಗರದಲ್ಲಿದ್ದ ಲಕ್ಷ್ಮಣ್ಸಿಂಗ್ ಪುತ್ರಿ ಖುಷಿಪರಗಾಯ(11) ಮೃತ ಬಾಲಕಿ. ಹರಿಯಾಣ ಮೂಲದ ನಂದಕಿಶೋರ್(50) ಆತ್ಮಹತ್ಯೆ ಮಾಡಿಕೊಂಡವ.
20 ವರ್ಷದಿಂದ ಜಿಂದಾಲ್ ನಗರದಲ್ಲಿ ವಾಸವಿದ್ದ ಲಕ್ಷ್ಮಣ್ಸಿಂಗ್, ದಾಬಸ್ಪೇಟೆ ಬಳಿಯ ಜಿಂದಾಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸಹೋದ್ಯೋಗಿಯಾಗಿದ್ದ ನಂದಕಿಶೋರ್ ತಿಂಗಳಿಂದ ಋಷಿಪರಗಾಯ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಪಾಲಕರಿಗೆ ವಿಷಯ ತಿಳಿದು ಸ್ನೇಹಿತರ ನಡುವೆ ಜಗಳವಾಗಿತ್ತು. ಲಕ್ಷ್ಮಣ್ಸಿಂಗ್, ಜಿಂದಾಲ್ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೆ ದೂರು ನೀಡಿದ್ದರಿಂದ ಸಂಘದ ಮುಖ್ಯಸ್ಥರು ನಂದಕಿಶೋರ್ಗೆ ಮನೆ ಖಾಲಿ ಮಾಡುವಂತೆ 15 ದಿನಗಳ ಹಿಂದೆ ನೋಟಿಸ್ ನೀಡಿದ್ದರು ಎನ್ನಲಾಗಿದೆ.
ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆಟವಾಡಲು ತೆರಳುತ್ತಿದ್ದ ಬಾಲಕಿಯನ್ನು ಎದುರುಗೊಂಡ ನಂದಕಿಶೋರ್ ಅಸಭ್ಯವಾಗಿ ವರ್ತಿಸಿ, ಚಾಕುವಿನಿಂದ ಬಾಲಕಿ ಹೊಟ್ಟೆ ಭಾಗಕ್ಕೆ ಹಿರಿದು ಕೊಲೆ ಮಾಡಿದ್ದಾನೆ. ಮಗಳ ಚೀರಾಟ ಕೇಳಿದ ತಂದೆ ಲಕ್ಷ್ಮಣ್ಸಿಂಗ್, ಪುತ್ರಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಪ್ರಯೋಜನವಾಗಿಲ್ಲ. ನಂದಕಿಶೋರ್ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಆರೋಪಿ ಕುಟುಂಬಸ್ಥರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗಿಲ್ಲ. ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.