

ಕಿಶೋರ್ ಕುಮಾರ್ ವಿ.ಎಂ. ವಿಜಯಪುರ
ಎಲ್ಲೆಂದರಲ್ಲಿ ಗುಟ್ಖಾ, ಎಲೆ, ಅಡಕೆ ಅಗೆದು ಉಗಿಯಲಾಗುತ್ತದೆ, ಕಸದ ರಾಶಿಯಿಂದ ಅಸಹ್ಯಕರ ವಾತಾವರಣ, ಮುರಿದ ಕುರ್ಚಿಗಳು, ಅನಧಿಕೃತ ಜಾಹೀರಾತು ಫಲಕಗಳು ವಿಜಯಪುರ ಬಸ್ ನಿಲ್ದಾಣದ ಅಂದವನ್ನೇ ಕೆಡಿಸಿವೆ.
ಹೌದು..! ಮೂಲಸೌಕರ್ಯಗಳಿಲ್ಲದೆ ವಿಜಯಪುರ ಬಸ್ ನಿಲ್ದಾಣ ಸೊರಗಿದ್ದು, ನಿಲ್ದಾಣದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ.
ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿಲ್ಲ. ಶೌಚಗೃಹದ ನಿರ್ವಹಣೆ ದೂರದ ಮಾತನಾಗಿದೆ. ನಿಲ್ದಾಣದ ನೆಲಹಾಸಿಗೆ ಕಿತ್ತಿರುವುದು ಪ್ರಯಾಣಿಕರಿಗೆ ಕಿರಿಕಿರಿ ಮಾಡುತ್ತಿದೆ. ರಾತ್ರಿ ವೇಳೆ ಸೂಕ್ತ ಬೆಳಕಿನ ವ್ಯವಸ್ಥೆ ಇಲ್ಲದಿರುವುದು ಕುಡುಕರ ತಾಣವಾಗಿ ಮಾರ್ಪಡುತ್ತಿದೆ. ಬಸ್ ನಿಲ್ದಾಣದ ಅವ್ಯವಸ್ಥೆಯಿಂದ ಪ್ರಯಾಣಿಕರು ಗಂಟೆ ಗಂಟಲೇ ಬಸ್ಸಿಗಾಗಿ ನಿಂತುಕೊಂಡೇ ಕಾಯಬೇಕಿದೆ. ಇಲ್ಲಿಯೇ ರಸ್ತೆ ವಿಸ್ತರಣೆ ಕಾಮಗಾರಿ ಆರಂಭದಿಂದ ಧೂಳು ಹೆಚ್ಚಾಗಿರುವುದರಿಂದ ಅಂಗಡಿ ಮಳಿಗೆಗಳಲ್ಲಿರುವವರು ಹಾಗೂ ಪ್ರಯಾಣಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುತ್ತಿದೆ. ಸಾರಿಗೆ ಬಸ್ಗಳು ಹಾಗೂ ಖಾಸಗಿ ಬಸ್ ಒಂದೇ ನಿಲ್ದಾಣಕ್ಕೆ ಬಂದು ಸೇರುವುದರಿಂದ ಚಾಲಕರ ನಡುವೆ ಪೈಪೋಟಿ ಏರ್ಪಟ್ಟಿದೆ. ಎಲ್ಲೆಂದರಲ್ಲಿ ಬೈಕ್, ಕಾರುಗಳನ್ನು ನಿಲ್ಲಿಸುವುದರಿಂದ ಬಸ್ಗಳ ಸಂಚಾರಕ್ಕೆ, ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ.
ನಿಲ್ದಾಣದಲ್ಲೇ ರೇಷ್ಮೆ ವ್ಯಾಪಾರ : ಪ್ರತಿನಿತ್ಯವೂ ಪಟ್ಟಣಕ್ಕೆ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಶಿಡ್ಲಟ್ಟ, ತುಮಕೂರು, ತಿರುಪತಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ದೇವನಹಳ್ಳಿ ದೊಡ್ಡಬಳ್ಳಾಪುರ ಸೇರಿ ಅನೇಕ ಕಡೆಗಳಿಗೆ ಈ ನಿಲ್ದಾಣದ ಮೂಲಕವೇ ಬಸ್ ಸಂಚರಿಸುತ್ತವೆ. ಇಲ್ಲಿ ಪಕ್ಕದಲೇ ರೇಷ್ಮೆ ಮಾರುಕಟ್ಟೆ ಇದ್ದರೂ, ಕೆಲವರು ಬಸ್ ನಿಲ್ದಾಣದಲ್ಲೇ ರೇಷ್ಮೆ ವ್ಯಾಪಾರ ಮಾಡುವುದರಿಂದ ಬಸ್ ನಿಲ್ದಾಣವೋ ಅಥವಾ ರೇಷ್ಮೆ ಮಾರುಕಟ್ಟೆಯೋ ಎಂಬುದೇ ಗೊತ್ತಾಗುವುದಿಲ್ಲ. ಇಲ್ಲಿನ ಬಸ್ ನಿಲ್ದಾಣದಿಂದ ದಿನನಿತ್ಯ ನೂರಾರು ವಿದ್ಯಾರ್ಥಿಗಳು, ಉದ್ಯೋಗಿಗಳು, ಸಾರ್ವಜನಿಕರು ಬಸ್ ಸಂಚಾರ ಅವಲಂಬಿಸಿದ್ದಾರೆ. ಕಾಂಗ್ರೆಸ್ ಸರ್ಕಾರ "ಶಕ್ತಿ' ಯೋಜನೆಯಡಿ ನೀಡಿರುವ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯದಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ. ಆದರೆ ಬಸ್ ನಿಲ್ದಾಣದಲ್ಲಿ ಮೂಲಸೌಲಭ್ಯಗಳ ಕೊರತೆಯಿಂದ ಪ್ರಯಾಣಿಕರು ನಲುಗಿದ್ದಾರೆ.
ಡಿಪೋ ಆರಂಭಕ್ಕೆ ಇನ್ನೆಷ್ಟು ವರ್ಷ? : ಕಳೆದ 20 ವರ್ಷಗಳ ಹಿಂದೆ ಚೆಲುವರಾಯಸ್ವಾಮಿ ಅವರು ಸಾರಿಗೆ ಸಚಿವರಾಗಿದ್ದ ಅವಧಿಯಲ್ಲಿ ವಿಜಯಪುರದಲ್ಲಿ ಬಸ್ ಡಿಪೋ ಮಂಜೂರು ಮಾಡಿದ್ದರು. ಅದಾದ ದಶಕದ ಬಳಿಕ ನಿವೇಶನ ದೊರೆಯಿತು. ನಂತರ ನಾಲ್ಕಾರು ವರ್ಷಗಳ ಬಳಿಕ ಡಿಪೋಗೆ 4 ಎಕರೆ ನಿವೇಶನ ಸಿಕ್ಕಿದ್ದು, ನಿವೇಶನಕ್ಕೆ ಕಾಂಪೌಂಡ್ ನಿರ್ಮಿಸಿ ಹಾಗೇ ಬಿಡಲಾಗಿದೆ. ಡಿಪೋ ಮಂಜೂರಿಗೆ 10 ವರ್ಷ, ನಿವೇಶನ ಗುರುತಿಸಲು 4 ವರ್ಷ ಬೇಕಾದರೆ ಇನ್ನು ಡಿಪೋ ನಿರ್ಮಾಣಕ್ಕೆ ಇನ್ನೆಷ್ಟು ವರ್ಷಗಳ ಕಾಲ ಕಾಯಬೇಕೋ? ಎಂದು ಜನ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹೋಟೆಲ್ ಇಲ್ಲದೆ ಪರದಾಟ : ಕರೊನಾ ವೇಳೆ ಬಸ್ ನಿಲ್ದಾಣದಲ್ಲಿನ ಹೋಟೆಲ್ ಮುಚ್ಚಲಾಗಿದ್ದು, ಆದರೆ, ಮತ್ತೆ ಆರಂಭಗೊಳ್ಳದ ಪರಿಣಾಮ ಪ್ರಯಾಣಿಕರು ಹಾಗೂ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಚಾಲಕರು, ನಿರ್ವಾಹಕರು ಊಟ, ತಿಂಡಿ, ಕಾಫಿಗಾಗಿ ದೂರದ ಹೋಟೆಲ್ಗಳಿಗೆ ಹೋಗಬೇಕು. ಉಪಾಹಾರ, ಊಟ ಮುಗಿಸಿಕೊಂಡು ಬರುವುದು ತಡವಾಗುವುದರಿಂದ ಬಸ್ಗಳ ಸಮಯ ನಿರ್ವಹಣೆಯಲ್ಲಿಯೂ ಅಡೆತಡೆ ಉಂಟಾಗುತ್ತಿದೆ.
ಹೊಸದಾಗಿ ಇಲ್ಲಿಗೆ ಬರುವ ಪ್ರಯಾಣಿಕರಿಗೆ ಬಸ್ ನಿಲ್ದಾಣದಿಂದ ಬಸ್ಗಳು ಎಲ್ಲಿಂದ, ಎಲ್ಲಿಗೆ ಯಾವ ಸಮಯಕ್ಕೆ ತೆರಳುತ್ತವೆ ಎಂಬ ಮಾಹಿತಿ ಸರಿಯಾಗಿ ಸಿಗುತ್ತಿಲ್ಲ. ಇಲ್ಲಿ ಯಾವುದೇ ಮೂಲ ಸೌಕರ್ಯ ಇಲ್ಲ. | ವೇಣುಗೋಪಾಲ ಹರುಳುರುನಾಗೇನಹಳ್ಳಿ ಪ್ರಯಾಣಿಕರಿಗೆ ರಕ್ಷಣೆ ಇಲ್ಲದಂತಾಗಿದೆ. ಶಾಲಾ&ಕಾಲೇಜು ಸಮಯಕ್ಕೆ ಬಸ್ ಸೌಕರ್ಯವಿಲ್ಲ. ನಿಲ್ದಾಣದಲ್ಲಿ ಕುಡಿಯಲು ನೀರು ಸಿಗದ ಪರಿಸ್ಥಿತಿ ಇದೆ. ಬಸ್ ಹತ್ತುವ ವೇಳೆ ಮೊಬೈಲ್ ಕಳವು ಪ್ರಕರಣಗಳು ಹೆಚ್ಚಾಗಿದೆ. ಜೇಬುಗಳ್ಳರ ಹಾವಳಿ ಹೆಚ್ಚಾಗಿದ್ದರೂ ಪೊಲೀಸ್ ಸಿಬ್ಬಂದಿ ಕಾಣಸಿಗುವುದಿಲ್ಲ. ಜನಸಂದಣಿ ಇರುವ ಕಡೆಗಳಲ್ಲಿ ಸಿ.ಸಿ ಟಿವಿ ಕ್ಯಾಮರಾ ಅಳವಡಿಸದಿರುವುದು ಪ್ರಯಾಣಿಕರಿಗೆ ಭಯದ ವಾತಾವರಣ ಸೃಷ್ಟಿಸಿದೆ. | ಮುರಳಿ ಸ್ಥಳಿಯ ನಿವಾಸಿ.