ಮರೀಚಿಕೆಯಾದ ಪದವಿ ಕಾಲೇಜು ಕಟ್ಟಡ

A mirage-like degree college building
ಕಲಾದಗಿಯಲ್ಲಿ ಸ್ವಂತ ಕಟ್ಟಡವಿಲ್ಲದ ಸರ್ಕಾರಿ ಪದವಿ ಕಾಲೇಜಿಗೆ ಆಸರೆಯಾಗಿರುವ ಸರ್ಕಾರಿ ಗಂಡು ಮಕ್ಕಳ ಶಾಲೆ.
Published on

ಕಲಾದಗಿ: ನೂರಾರು ವಿದ್ಯಾರ್ಥಿಗಳ ಕಲಿಕೆಗೆ ಲಭ್ಯವಿರುವ ಕೊಠಡಿಗಳ ಸಂಖ್ಯೆ ನಾಲ್ಕೈದು ಮಾತ್ರ. ಇನ್ನು ಗ್ರಂಥಾಲಯ, ಆಟದ ಮೈದಾನ, ಶೌಚಗೃಹ ಮತ್ತಿತರ ವ್ಯವಸ್ಥೆಗಳು ಅಷ್ಟಕಷ್ಟೆ.16 ವರ್ಷಗಳಿಂದ ಶಿಕ್ಷಣ ನೀಡುತ್ತಿರುವ ಕಲಾದಗಿ ಸರ್ಕಾರಿ ಪದವಿ ಕಾಲೇಜಿನ ದುಸ್ಥಿತಿ ಇದು.

ಗ್ರಾಮೀಣ ಭಾಗದ ಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳ ಪಾಲಿನ ಆಶಾಕಿರಣವಾಗಿರುವ ಕಾಲೇಜು ಶಾಶ್ವತ ಕಟ್ಟಡವಿಲ್ಲದೆ ಗ್ರಾಮದ ಸರ್ಕಾರಿ ಗಂಡು ಮಕ್ಕಳ ಶಾಲೆಯಲ್ಲಿಯೇ ತರಗತಿ ನಡೆಸುತ್ತಿರುವುದು ಶಿಕ್ಷಣ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.

ಶಾಶ್ವತ ನೆಲೆಯದ್ದೇ ಸಮಸ್ಯೆ

2009ರಲ್ಲಿ ಶಾಸಕರಾಗಿದ್ದ ಮುರುಗೇಶ ಆರ್. ನಿರಾಣಿ ಇಚ್ಛಾಶಕ್ತಿಯಿಂದಾಗಿ ಮಂಜೂರಾದ ಪದವಿ ಕಾಲೇಜು ಪ್ರಾರಂಭದಲ್ಲಿ ಶ್ರೀ ಗುರುಲಿಂಗೇಶ್ವರ ಪ್ರೌಡಶಾಲೆ ಕೊಠಡಿಗಳಲ್ಲಿ ಆರಂಭವಾಯಿತು. 2013ರಲ್ಲಿ ಗಂಡುಮಕ್ಕಳ ಸರ್ಕಾರಿ ಕನ್ನಡ ಶಾಲೆಗೆ ಸ್ಥಳಾಂತರಿಸಲಾಯಿತು. ಆದರೆ, ಇಲ್ಲಿಯವರೆಗೆ ಶಾಶ್ವತ ಕಟ್ಟಡ ಒದಗಿಸಲು ಸಾಧ್ಯವಾಗಲಿಲ್ಲ.

ಕಟ್ಟಡ ನಿರ್ಮಾಣಕ್ಕೆ ಜಾಗ ಖರೀದಿಸಲು ಶಾಸಕರಾಗಿದ್ದ ಮುರುಗೇಶ ನಿರಾಣಿ ಅವರು ಒಂದಿಷ್ಟು ದೇಣಿಗೆ ನೀಡುವುದಾಗಿ, ಉಳಿದಿದ್ದನ್ನು ಸ್ಥಳೀಯರು ಹೊಂದಿಸಬೇಕೆಂದು ಹೇಳಿದರೂ ಅದು ಈಡೇರಲಿಲ್ಲ. ಕಳೆದ ಅವಧಿಯಲ್ಲಿ ಸ್ಥಳೀಯ ಪ್ರವಾಸಿ ಬಂಗಲೆಯ ಜಾಗದಲ್ಲಿ ನಿರ್ಮಿಸಲು ಕಾರ್ಯನ್ಮುಖರಾದರೂ ಅದು ಸಾಧ್ಯವಾಗಲಿಲ್ಲ.

ಹಾಲಿ ಶಾಸಕ ಜೆ.ಟಿ.ಪಾಟೀಲ ಕಲಾದಗಿ ಪುನರ್ವಸತಿ ಕೇಂದ್ರದಲ್ಲಿ ಪದವಿ ಕಾಲೇಜು ಸೇರಿ ಐಟಿಐ ಕಾಲೇಜು, ಉರ್ದು ಪ್ರೌಢಶಾಲೆ ಹಾಗೂ ಮುರಾರ್ಜಿ ವಸತಿ ಶಾಲೆಗಳ ನಿರ್ಮಾಣಕ್ಕೆ ಸೂಕ್ತ ಜಾಗ ಪಡೆಯಲು ನಡೆಸಿದ ಪ್ರಯತ್ನದಿಂದಾಗಿ ಯುಕೆಪಿ ಅಧಿಕಾರಿಗಳು 25 ಎಕರೆ ಜಾಗವನ್ನು ಕೇವಲ ಕಾಗದ ಪತ್ರಗಳಲ್ಲಿ ಮಾತ್ರ ಗುರುತಿಸಿದ್ದಾರೆ. ಆದರೆ, ಜಾಗ ಎಲ್ಲಿದೆ ಎಂದು ಶಿಕ್ಷಣ ಇಲಾಖೆಗೆ ದಾಖಲೆ ಒದಗಿಸಿಲ್ಲ.

1ಕೋಟಿ ರೂ. ಅನುದಾನ ಬಿಡುಗಡೆ

ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ಕೆಲವು ತಿಂಗಳ ಹಿಂದೆಯೇ ತಾತ್ಕಾಲಿಕ ಅನುದಾನವಾಗಿ ಒಂದು ಕೋಟಿ ರೂ. ಮಂಜೂರು ಮಾಡಿ, ಗುತ್ತಿಗೆದಾರರನ್ನು ನೇಮಿಸಿದೆ. ಆದರೆ, ಜಾಗ ಗುರುತಿಸಿ ಕೊಡಿ ಎಂದು ಕೇಳಿದರೆ ಐಟಿಐ ಕಾಲೇಜು, ಉರ್ದು ಪ್ರೌಢಶಾಲೆ ಹಾಗೂ ಮುರಾರ್ಜಿ ವಸತಿ ಶಾಲೆಗಳ ನಿರ್ಮಾಣಕ್ಕೆ ಅನುದಾನ ನೀಡಿದ ಮೇಲೆ ಜಾಗ ಗುರುತಿಸುತ್ತೇವೆ ಎಂದು ಯುಕೆಪಿ ಅಧಿಕಾರಿಗಳು ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಈ ಬಗ್ಗೆ ಜೆ.ಟಿ. ಪಾಟೀಲ ಗರಂ ಆದ ಬಳಿಕ, ಪದವಿ ಕಾಲೇಜು ನಿರ್ಮಾಣಕ್ಕೆ 2 ಎಕರೆ ಜಾಗ ನೀಡುತ್ತೇವೆ ಎಂದು ಯುಕೆಪಿ ಅಧಿಕಾರಿಗಳು ಹೇಳುತ್ತಿರುವುದು ಶಾಸಕರ ಹಾಗೂ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಯುಕೆಪಿ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ಹಾದಿ ಹಿಡಿಯುವ ಸಾಧ್ಯತೆ ಇದೆ. ಅದಕ್ಕೂ ಮೊದಲೇ ಪದವಿ ಕಾಲೇಜಿಗೆ ಕನಿಷ್ಠ 5 ಎಕರೆ ನೀಡಬೇಕು. ಅನುದಾನ ವ್ಯರ್ಥವಾಗುವ ಮುನ್ನ ಜಾಗ ಗುರುತಿಸಿ, ಕಾಲೇಜು ಶಿಕ್ಷಣ ಇಲಾಖೆಗೆ ಹಸ್ತಾಂತರಿಸುವ ಕಾರ್ಯವಾಗಬೇಕಿದೆ.

ಪದವಿ ಕಾಲೇಜು ಸೇರಿದಂತೆ ಇನ್ನಿತರ ಶಾಲೆಗಳ ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಕಲಾದಗಿಯ ಪು.ಕೇಂ. ದಲ್ಲಿ ಸೂಕ್ತ ಜಾಗವನ್ನು ಯುಕೆಪಿಯಿಂದ ಪಡೆಯುವ ಪ್ರಯತ್ನ ನಡೆದಿದೆ. ಆದರೆ, ಅಧಿಕಾರಿಗಳ ಅಸಮರ್ಪಕ ನಿರ್ಧಾರಗಳಿಂದ ತಡವಾಗುತ್ತಿದೆ. ಕೆಲವೇ ದಿನಗಳಲ್ಲಿ ಈ ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣಿಸಿ, ಕಾಲೇಜಿನ ಕಟ್ಟಡಕ್ಕೆ ಭೂಮಿಪೂಜೆ ಮಾಡುತ್ತೇವೆ. ಜೆ.ಟಿ.ಪಾಟೀಲ, ಶಾಸಕರು ಪದವಿ ಕಾಲೇಜು, ಐಟಿಐ, ಮುರಾರ್ಜಿ ವಸತಿ ಶಾಲೆ ಹಾಗೂ ಉರ್ದು ಪ್ರೌಢಶಾಲೆಗಳ ಕಟ್ಟಡ ನಿರ್ಮಾಣಕ್ಕೆ ಪು.ಕೇಂದ್ರದಲ್ಲಿ ಜಾಗ ಕೊಡಲು ಯುಕೆಪಿ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನು 15 ದಿನಗಳಲ್ಲಿ ಸೂಕ್ತ ಜಾಗ ಮಂಜೂರು ಮಾಡದಿದ್ದರೆ ಯುಕೆಪಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡುತ್ತೇವೆ. ಎಂ.ಬಿ.ಸೌದಾಗರ, ಹಿರಿಯ ಮುಖಂಡ, ಕಲಾದಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net