ವಂದೇ ಭಾರತ್ ರೈಲಿನಲ್ಲಿ 14 ನಿಮಿಷಗಳ ಪವಾಡ !

Vande Bharat train
Published on

ಮೈಸೂರು; ನೈಋತ್ಯ ರೈಲ್ವೆಯ ಮೈಸೂರು ವಿಭಾಗ ‘14 ನಿಮಿಷಗಳ ಪವಾಡ’ ಅಭಿಯಾನದಡಿ ಚೆನ್ನೈ-ಮೈಸೂರು ವಂದೇ ಭಾರತ್ ರೈಲಿಗೆ ಹೊಸದಾಗಿ ಸ್ವಚ್ಛಗೊಳಿಸುವ ವಿಧಾನವನ್ನು ಅಳವಡಿಸಿಕೊಂಡಿದೆ.


16 ಕೋಚ್‌ಗಳ ರೈಲಿನಲ್ಲಿ ಈ ವಿನೂತನ ಪ್ರಕ್ರಿಯೆ ಸ್ವಚ್ಛತೆ ಮತ್ತು ದಕ್ಷತೆಯಲ್ಲಿ ನವೀನ ಮಾದರಿ ಆಗಿದೆ. ಈ ರೈಲು ವಿವಿಧ ಸ್ಥಾನಗಳಿಗೆ ಆಗಮಿಸಿದ ನಂತರ ಶುಚಿಗೊಳಿಸುವ ಪ್ರಕ್ರಿಯೆಯನ್ನು ಸುಗಮಗೊಳಿಸುವಂತೆ ವಿನ್ಯಾಸಗೊಳಿಸಲಾಗಿದೆ. ಭಾರತೀಯ ರೈಲ್ವೆ ಅಭಿವೃದ್ಧಿಪಡಿಸಿರುವ ಈ ವಿಧಾನದಿಂದ ಕೇವಲ 14 ನಿಮಿಷಗಳಲ್ಲಿ ರೈಲು ಸಂಪೂರ್ಣವಾಗಿ ಶುಚಿಯಾಗಲಿದೆ.


ಸ್ವಚ್ಛತೆಯಲ್ಲಿ 48 ಸಿಬ್ಬಂದಿ ಮತ್ತು ಮೂವರು ಮೇಲ್ವಿಚಾರಕರು ಭಾಗಿಯಾಗುತ್ತಾರೆ. ಪ್ರತಿಯೊಂದು ಬೋಗಿಗೂ ತರಬೇತಿ ಪಡೆದ ಮೂವರು ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಮೊದಲ ಸಿಬ್ಬಂದಿ ಕಸವನ್ನು ಸಂಗ್ರಹಿಸಿ ಒರೆಸುತ್ತಾರೆ. ಹೊರಗಿನ ಕಿಟಕಿ ಗಾಜನ್ನು ಸ್ವಚ್ಛಗೊಳಿಸುತ್ತಾರೆ. ಎರಡನೇ ಸಿಬ್ಬಂದಿ ಉಪಾಹಾರ ಮೇಜು, ಆಸನ ಶುಚಿಗೊಳಿಸಿ ನೀರಿನಿಂದ ಒರೆಸುತ್ತಾರೆ. ಮೂರನೇ ಸಿಬ್ಬಂದಿ ಕಸದಬುಟ್ಟಿ, ಶೌಚಗೃಹ, ಕನ್ನಡಿ, ದ್ವಾರದ ಪ್ರದೇಶ ಸ್ವಚ್ಛಗೊಳಿಸುತ್ತಾರೆ.


14 ನಿಮಿಷಗಳ ಈ ಪವಾಡ ಕಾರ್ಯಕ್ರಮವನ್ನು ವಂದೇ ಭಾರತ್ ರೈಲಿನಲ್ಲಿ ಸುವ್ಯವಸ್ಥಿತಗೊಳಿಸಲಾಗಿದೆ. ಇದು ಹೆಚ್ಚು ಪರಿಣಾಮಕಾರಿ, ನಿಖರವಾದ ಸಮಯದೊಳಗೆ ರೈಲು ಹಿಂದಿರುಗಲು ಸಹಾಯಕವಾಗಿದೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ಹೇಳಿದರು.

ಈ ಮೊದಲು ವಂದೇ ಭಾರತ್ ರೈಲಿನ 16 ಕೋಚ್‌ಗಳನ್ನು ಸ್ವಚ್ಛಗೊಳಿಸಲು 30ರಿಂದ 45 ನಿಮಿಷ ಬೇಕಾಗುತ್ತಿತ್ತು. ಪವಾಡ ವ್ಯವಸ್ಥೆ ಅಳವಡಿಸಿಕೊಂಡ ಬಳಿಕ ಕೇವಲ 14 ನಿಮಿಷ ತೆಗೆದುಕೊಳ್ಳುತ್ತಿದೆ.

ಏಕ್ ತಾರೀಖ್ ಏಕ್ ಘಂಟಾ ಏಕ್ ಸಾಥ್!

ಮೈಸೂರು ವಿಭಾಗದಲ್ಲಿ ಸೆ. 15ರಿಂದ ಅ.2 ರವರೆಗೆ ಆಯೋಜಿಸಲಾಗಿರುವ 15 ದಿನಗಳ ವಿಶೇಷ ಸ್ವಚ್ಛತಾ ಅಭಿಯಾನದ ಅಂಗವಾಗಿ ಮೈಸೂರು ರೈಲು ನಿಲ್ದಾಣದಲ್ಲಿ ‘ಏಕ್ ತಾರೀಖ್ ಏಕ್ ಘಂಟಾ ಏಕ್ ಸಾಥ್’ ಶೀರ್ಷಿಕೆಯಡಿ ಬೃಹತ್ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮವನ್ನು ಭಾನುವಾರ ಆಯೋಜಿಸಲಾಗಿತ್ತು.

ಹಿರಿಯ ಅಧಿಕಾರಿಗಳು, ವಿಭಾಗದ ಸಿಬ್ಬಂದಿ, ಬ್ರಹ್ಮಕುಮಾರಿ ಇನ್ನಿತರ ಸಂಸ್ಥೆಗಳ ಸ್ವಯಂ ಸೇವಕರು ಶ್ರಮದಾನ ಚಟುವಟಿಕೆಯಲ್ಲಿ ಭಾಗವಹಿಸಿದ್ದರು. ರೈಲ್ವೆ ನಿಲ್ದಾಣಗಳು, ರೈಲುಗಳು, ಕಚೇರಿಗಳು, ಕಾಲನಿಗಳು, ಡಿಪೋಗಳು, ಆಸ್ಪತ್ರೆಗಳು ಸೇರಿದಂತೆ ಇತ್ಯಾದಿ ಆವರಣಗಳ ಸ್ವಚ್ಛತೆಯಲ್ಲಿ ಸುಧಾರಣೆಗಳನ್ನು ತರುವ ಉದ್ದೇಶದಿಂದ ಸ್ವಚ್ಛತಾ ಪಾಕ್ಷಿಕವನ್ನು ಆಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net