ಮುಳಬಾಗಿಲು: ತಾಲೂಕಿನ ಗ್ರಾಮವೊಂದರಲ್ಲಿ ಅಪ್ರಾಪ್ತೆ ಮೇಲೆ 3 ತಿಂಗಳಿನಿಂದ ನಾಲ್ವರು ಅತ್ಯಾಚಾರ ಎಸಗಿರುವ ಆಘಾತಕಾರಿ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಇದುವರೆಗೆ 6 ಮಂದಿಯನ್ನು ವಿಚಾರಣೆಗೆ ಒಳಪಡಿಸಿರುವ ಪೊಲೀಸರು, ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ಸಂತ್ರಸ್ತ ಬಾಲಕಿಯು ಗುಪ್ತಾಂಗದಲ್ಲಿ ಉರಿ ಎಂದು ಗುರುವಾರ ತಾಯಿ ಮುಂದೆ ಹೇಳಿಕೊಂಡಿದ್ದು, ಬಾಲಕಿಯನ್ನು ಮುಳಬಾಗಿಲು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಸಣೆ ಮಾಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕಿ ತಾಯಿ ನೀಡಿದ ದೂರಿನ ಮೆರೆಗೆ ನಂಗಲಿ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಆರಂಭದಲ್ಲಿ ಬಾಲಕಿ ಏನನ್ನೂ ಹೇಳಿರಲಿಲ್ಲ. ಪೊಲೀಸರ ಸಮಾಲೋಚನೆಯಲ್ಲಿ, ಸುಮಾರು 40ರಿಂದ 48 ವರ್ಷದ ನಾಲ್ವರು ಬಾಲಕಿಯ ಬಚ್ಚಲು ಮನೆಯಲ್ಲಿಯೇ 3 ತಿಂಗಳಿಂದ ಆಗಾಗ ಪ್ರತ್ಯೇಕವಾಗಿ ಅತ್ಯಾಚಾರ ಎಸಗಿರುವುದಾಗಿ ತಿಳಿಸಿದ್ದಾಳೆ ಎನ್ನಲಾಗಿದೆ. ಶುಕ್ರವಾರ ಒಬ್ಬ ಆರೋಪಿಯನ್ನು, ಶನಿವಾರ ಮೂವರನ್ನು ಪೊಲೀಸರು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.