ಪರೀಕ್ಷೆ ಬರೆಯದೆ ವಿದ್ಯಾರ್ಥಿನಿಯರು ವಾಪಸ್​: ಹಿಜಾಬ್​ಗಾಗಿ ಹಠ ಬೇಡ, ವಿದ್ಯೆ ಮುಖ್ಯ... ಸಚಿವ ನಾರಾಯಣಗೌಡ ಮನವಿ

Narayanagowda
Published on

ಬೆಂಗಳೂರು: ವಿದ್ಯೆ, ಬದುಕು, ಜೀವನ ನಿರ್ವಹಣೆ ಮುಖ್ಯ. ಹಿಜಾಬ್​ಗಾಗಿ ವಿದ್ಯಾರ್ಥಿಗಳು ಹಠ ಮಾಡಬಾರದು ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ಮನವಿ ಮಾಡಿದರು.

ವಿಧಾನಸೌಧ ಮೊಗಸಾಲೆಯಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಸಚಿವರು, ಶಿವಮೊಗ್ಗದಲ್ಲಿ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯದೆ ಹಿಂತಿರುಗಿದ್ದಾರೆ. ಗೊಂದಲ ಉಂಟಾಗಿದೆ ಎಂದು ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿ ನೋಡಿದ ಕೂಡಲೇ ಡಿಸಿ ಮತ್ತು ಎಸ್​ಪಿ ಜತೆ ಮಾತನಾಡಿದ್ದೇನೆ. ಆ ತರಹದ ಯಾವುದೇ ಗೊಂದಲ‌ವಾಗಿಲ್ಲ. 7 ವಿದ್ಯಾರ್ಥಿಗಳು ಎಕ್ಸಾಂ ಬರೆಯಲ್ಲ ಎಂದಿದ್ದರು. ಆ ವೇಳೆ ಮಾಧ್ಯಮದವರು ಅದನ್ನು ಚಿತ್ರೀಕರಿಸಿದ್ದಾರೆ. ಯಾವುದೇ ರೀತಿಯ ಗೊಂದಲ ಆಗಿಲ್ಲ ಎಂದರು.

ಹಿಜಾಬ್ ತೆಗೆದು ಪರೀಕ್ಷೆ ಬರೆಯಿರಿ ಎಂದು ಅಧಿಕಾರಿಗಳು ಹೇಳಿದ್ದರು. ವಿದ್ಯಾರ್ಥಿನಿಯರನ್ನು ಗೌರವದಿಂದಲೇ ನೋಡಲಾಗಿದೆ. ಬಳಿಕ ಅವರನ್ನು ತಂದೆ-ತಾಯಿ ಬಂದು ಮನೆಗೆ ಕರೆದು‌ಕೊಂಡು ಹೋದರು. ವಿದ್ಯಾರ್ಥಿಗಳು ಹಠ ಹಿಡಿಯಬಾರದು. ಪರೀಕ್ಷೆ ಎದುರಿಸಿ ತಮ್ಮ ಲೈಫ್ ಮುನ್ನಡೆಸಿ, ಕೋರ್ಟ್ ತೀರ್ಪನ್ನು ಪಾಲನೆ ಮಾಡಬೇಕು ಎಂದು ನಾರಾಯಣಗೌಡ ಹೇಳಿದರು.

ಶಾಸಕ ಜಮೀರ್​ರ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿದ ನಾರಾಯಣಗೌಡ, ಜಮೀರ್ ಕುಟುಂಬದಲ್ಲೇ ಹಿಜಾಬ್ ಧರಿಸಲ್ಲ. ಅವರು ಆ ರೀತಿ ಹೇಳುವುದು ಸರಿಯಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net