ದೊಡ್ಡಬಳ್ಳಾಪುರದಲ್ಲೇ ಜನೋತ್ಸವ, ದಿನಾಂಕ ಇನ್ನೂ ಫೈನಲ್ ಆಗಿಲ್ಲ: ಡಾ.ಕೆ.ಸುಧಾಕರ್

Dr K Sudhakar
Published on

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಮೂರು ವರ್ಷಗಳ ಸಾಧನೆ ಬಿಂಬಿಸಲು ಉದ್ದೇಶಿತ ರಾಜ್ಯಮಟ್ಟದ ಜನೋತ್ಸವ ಕಾರ್ಯಕ್ರಮ ದೊಡ್ಡಬಳ್ಳಾಪುರದಲ್ಲೇ ನಡೆಯಲಿದೆ.

ಆದರೆ ದಿನಾಂಕ ಇನ್ನೂ ಫೈನಲ್ ಆಗಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ‌ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರು ಸೇರಿಕೊಂಡು ಗುರುವಾರದೊಳಗೆ ದಿನಾಂಕ ಅಂತಿಮಗೊಳಿಸಲಿದ್ದಾರೆ. ತಾತ್ಕಾಲಿಕವಾಗಿ ಆ.28 ಎಂದು ನಿಗದಿಪಡಿಸಿದ್ದರೂ ಪಕ್ಷದ ರಾಷ್ಟ್ರೀಯ ನಾಯಕರು ನೀಡಲಿರುವ ಕಾಲಾವಕಾಶದ ಮೇಲೆ ದಿನಾಂಕ ಅಂತಿಮವಾಗಲಿದೆ ಎಂದು ಜನೋತ್ಸವ ಉಸ್ತುವಾರಿ ಜವಾಬ್ದಾರಿ ಹೊತ್ತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಸಿಎಂ ಬೊಮ್ಮಾಯಿ‌ ಅಧ್ಯಕ್ಷತೆಯಲ್ಲಿ ಜನೋತ್ಸವ ಪೂರ್ವಭಾವಿ ಸಭೆಯಾಗಿದೆ. ಪಕ್ಷದ ರಾಷ್ಟ್ರೀಯ ನಾಯಕರ ಒಪ್ಪಿಗೆ ಪಡೆದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜತೆಗೆ ಮತ್ತೊಬ್ಬ ರಾಷ್ಟ್ರೀಯ ನಾಯಕರನ್ನು ಆಹ್ವಾನಿಸುವ ಚಿಂತನೆಯಿದೆ. ಸಿಎಂ ಬೊಮ್ಮಾಯಿ‌ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರು ಈ ಬಗ್ಗೆ ರಾಷ್ಟ್ರೀಯ ನಾಯಕರ ಜತೆಗೆ ಚರ್ಚಿಸಲಿದ್ದು, ಒಂದೆರಡು ದಿನಗಳಲ್ಲಿ ದಿನಾಂಕ ಫೈನಲ್ ಆಗಲಿದೆ ಎಂದು ಬುಧವಾರ ಸುದ್ದಿಗಾರರಿಗೆ ಸುಧಾಕರ್​ ತಿಳಿಸಿದರು.

ಕಳೆದ ಮೂರು ವರ್ಷಗಳ ಪ್ರಗತಿ ವರದಿ ಮಂಡನೆ, ಫಲಾನುಭವಿಗಳ ಸಮಾವೇಶ ಹಾಗೂ ಹಳೇ ಮೈಸೂರು ಭಾಗದಲ್ಲಿ ಪಕ್ಷಕ್ಕಿರುವ ಶಕ್ತಿ ಪ್ರದರ್ಶಿಸುವುದು ಜನೋತ್ಸವದ ಉದ್ದೇಶ. ರಿಪೋರ್ಟ್ ಕಾರ್ಡ್ ಬಗ್ಗೆ ಪ್ರತಿಪಕ್ಷಗಳು ಏನೇ ಟೀಕೆ- ಟಿಪ್ಪಣಿ ಮಾಡಲಿ, ಜನತಾ ಕೋರ್ಟ್ ಅಂತಿಮ ತೀರ್ಪು ನೀಡುತ್ತದೆ. ಕಾಂಗ್ರೆಸ್​ನ ರಿಪೋರ್ಟ್ ಕಾರ್ಡ್​ಗೆ‌ 2018ರಲ್ಲಿ ಯಾವ ರೀತಿ ಜನಾದೇಶ ಸಿಕ್ಕಿತು? 123 ರಿಂದ 79 ಸ್ಥಾನಗಳಿಗೆ ಕುಸಿದದ್ದು ಹೇಗೆ? ಎಂಬುದು ಗೊತ್ತಿದೆ.

ಆದರೆ, ರಾಜ್ಯ ಬಿಜೆಪಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಹೇಳಿಕೊಳ್ಳಬೇಕಾಗಿದೆ. ಈ ಕಾರಣಕ್ಕೆ ಜನೋತ್ಸವ ನಡೆಯಲಿದ್ದು, ಈ ಸಮಾವೇಶದಿಂದ ಪಕ್ಷದ ಕಾರ್ಯಕರ್ತರಲ್ಲಿ ಹುರುಪು, ಶಕ್ತಿ ಹೆಚ್ಚಲಿದೆ ಎಂದು ಡಾ.ಕೆ.ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net