ಮಂಗಳೂರಲ್ಲಿ ಮಿನಿ ಜಂಗಲ್! ಮಂಗಳಾ ಕ್ರೀಡಾಂಗಣದ ಬಳಿ ನಿರ್ಮಾಣಗೊಂಡಿದೆ ಹಸಿರು ಪರಿಸರ

mangaluru
ಮಂಗಳೂರು ಮಂಗಳಾ ಕ್ರೀಡಾಂಗಣದ ಬಳಿ ನಿರ್ಮಾಣಗೊಂಡಿರುವ ಮಿನಿ ಜಂಗಲ್ ನಲ್ಲಿ ರವಿರಾಜ್ ಕುಮಾರ್ ದಿನನಿತ್ಯ ನಿರ್ವಹಣೆ ಮಾಡುತ್ತಿದ್ದಾರೆ
Published on

ಕಿರಣ್ ಪೈ ಮಂಗಳೂರು

ಮಂಗಳೂರು ನಗರದ ಪ್ರಸಿದ್ಧ ಅಥ್ಲೆಟಿಕ್ಸ್ ಮಂಗಳಾ ಕ್ರೀಡಾಂಗಣದ ಪಾರ್ಶ್ವದಲ್ಲಿನ ಯುವಸಬಲೀಕರಣ ಕ್ರೀಡಾ ಇಲಾಖೆಯ ಜಾಗದಲ್ಲಿ ನಾಲ್ವರ ತಂಡ ಕಳೆದ 7-8 ವರ್ಷಗಳಿಂದ ಪರಿಸರ ಕಾಳಜಿ ವಹಿಸುವ ಸಲುವಾಗಿ ಮಿನಿ ಜಂಗಲ್ ನಿರ್ಮಿಸಿದ್ದಾರೆ.

ನಗರದಲ್ಲಿ ಹಸಿರು ವಲಯ ಕ್ಷೀಣಿಸುತ್ತಿರುವ ಸಂದರ್ಭ ಈ ತಂಡದ ಸಾಧನೆ ಶ್ಲಾಘನೀಯ. ರವಿರಾಜ್ ಶೆಟ್ಟಿ ನಗರದ ಖಾಸಗಿ ಟ್ರಾವೆಲ್ ಕಂಪನಿ ಉದ್ಯೋಗಿ. ಶ್ರೀಕುಮಾರ್ ಮೂಲತಃ ಕೇರಳದವರಾಗಿದ್ದು, ಕಳೆದ 25 ವರ್ಷಗಳಿಂದ ಮಂಗಳೂರಿನಲ್ಲಿ ವಾಸವಿದ್ದು ಇನ್ಫೋಸಿಸ್‌ನ ಸೇಫ್ಟಿ ವಿಭಾಗದಲ್ಲಿ ಇಂಜಿನಿಯರ್ ಉದ್ಯೋಗದಿಂದ ನಿವೃತ್ತಿ ಪಡೆದವರು. ವಿನೋದ್ ಆಳ್ವ ಹಾಗೂ ರವಿರಾಜ್ ಕುಮಾರ್ ದಿನನಿತ್ಯ ನಿರ್ವಹಣೆ ಮಾಡುತ್ತಿದ್ದಾರೆ.

ಇವರು ಬೆಳೆಸಿರುವ ಗಿಡಗಳು ಈಗ ಮರವಾಗಿ ಸುತ್ತಲಿನ ಪರಿಸರ ಸಮತೋಲನವನ್ನು ಕಾಪಾಡುತ್ತಿವೆ. ಕ್ರೀಡಾಂಗಣದ ಪರಿಸರದಲ್ಲಿ ಅನೇಕ ವಸತಿ ಸಮುಚ್ಚಯಗಳು, ಮನೆಗಳು, ಶಾಲೆಗಳಿದ್ದು, ಮೈದಾನದಲ್ಲಿ ಅಭ್ಯಾಸ ಮಾಡುವ ಕ್ರೀಡಾಳುಗಳಿಗೆ, ವಾಕಿಂಗ್ ಪ್ರಿಯರಿಗೆ ಇಲ್ಲಿನ ಮರ ಗಿಡಗಳು ಉಪಯುಕ್ತ ಗಾಳಿ ನೆರಳು ನೀಡುವ ಮೂಲವಾಗಿವೆ.

ಸ್ವಚ್ಛ ಭಾರತ ಅಭಿಯಾನ ಸ್ಫೂರ್ತಿ

ಈ ಕಾರ್ಯ ಮಾಡಲು ಇವರ ತಂಡಕ್ಕೆ ಸ್ವಚ್ಛ ಭಾರತ ಅಭಿಯಾನ ಸ್ಫೂರ್ತಿ ನೀಡಿತು ಎಂಬುದು ರವಿರಾಜ್ ಶೆಟ್ಟಿಯವರ ಅಭಿಪ್ರಾಯ. ಕ್ರೀಡಾಂಗಣದ ಸುತ್ತಲೂ ಮೊದಲು ಅನೈತಿಕ ಚಟುವಟಿಕೆ ಜತೆಗೆ ಪ್ಲಾಸ್ಟಿಕ್, ಪೇಪರ್ ಕಸಗಳನ್ನು ಹಾಕಲಾಗುತ್ತಿತ್ತು. ಉತ್ತಮ ಮರ ಗಿಡಗಳು ಇಲ್ಲದೇ ಕಳೆ ಗಿಡಗಂಟಿಗಳು ಬೆಳೆದಿದ್ದವು. ಇದು ಉದ್ಯಾನವನ್ನು ನಿರ್ಮಿಸಲು ಮುಖ್ಯ ಕಾರಣ. ಸಣ್ಣ ಪ್ರಮಾಣದಲ್ಲಿ ಆರಂಭಿಸಿ ಈಗ ಮಂಗಳಾ ಕ್ರೀಡಾಂಗಣದ ಮುಖ್ಯ ಪಾರ್ಶ್ವದಿಂದ, ಯು.ಎಸ್.ಮಲ್ಯ ಒಳಾಂಗಣ ಕ್ರೀಡಾಂಗಣ, ಬಾಸ್ಕೆಟ್ ಬಾಲ್, ಟೆನಿಸ್ ಕೊರ್ಟ್, ಕರಾವಳಿ ಉತ್ಸವ ಮೈದಾನದವರೆಗೆ ಒಟ್ಟು ಒಂದೂವರೆ ಕಿಲೋಮೀಟರ್ ವ್ಯಾಪ್ತಿಯಲ್ಲಿ 150ಕ್ಕೂ ಹೆಚ್ಚು ಮರಗಳು ಮತ್ತು 6 ಸಾವಿರಕ್ಕೂ ಹೆಚ್ಚಿನ ಗಿಡಗಳನ್ನು ಈ ತಂಡ ಸ್ವಂತ ಖರ್ಚಿನಲ್ಲಿ ನೆಟ್ಟಿದೆ.

ಮನಸ್ಸಿಗೆ ಮುದ ನೀಡುತ್ತಿದೆ ಉದ್ಯಾನ

ಮರಗಳಲ್ಲಿ 40ಕ್ಕೂ ಹೆಚ್ಚಿನ ಪುನರ್ಪುಳಿ, 20 ಪೇರಳೆ, 10 ಪೀನಟ್ ಬಟರ್, ಸಂಪಿಗೆ, ನೆಲ್ಲಿಕಾಯಿ ಮರ, ನೇರಳೆ, ಮಾವಿನ ಮರ, ಕದಂಬ ಮರ, ಹಲಸು, ಕೋಳಿ ಜುಟ್ಟು ಇತ್ಯಾದಿ ಮರಗಳಿವೆ. ಹೂವಿನ ಗಿಡಗಳಲ್ಲಿ 100ಕ್ಕೂ ಹೆಚ್ಚು ವಿವಿಧ ಪ್ರಭೇದಗಳನ್ನು ಕಾಣಬಹುದು. ಇವುಗಳಲ್ಲಿ ಮುಖ್ಯವಾಗಿ 15 ವಿವಿಧ ಬಣ್ಣದ ದಾಸವಾಳ, ಕರವೀರ ಕಾಡು ಕಣಗಿಲೆ, ಸಣ್ಣ ಸೇವಂತಿಗೆ, ಮಲ್ಲಿಗೆ, ಗುಲಾಬಿ, ಅಮೃತ, ಎಕ್ಕದ ಹೂ, ಅನೇಕ ಕ್ರಾಟನ್ ಹೂಗಳು ಹೆಚ್ಚಾಗಿ ಕಾಣಸಿಗುತ್ತವೆ. ಮುಂಜಾನೆ ಪಕ್ಷಿಗಳು, ನೂರಾರು ಪ್ರಜಾತೀಯ ಚಿಟ್ಟೆಗಳನ್ನು ನೋಡುತ್ತಾ ನಿತ್ಯ ವಾಕಿಂಗ್ ಮಾಡುವಾಗ ಮನಸ್ಸಿಗೆ ಆನಂದವಾಗುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.

ಆರಂಭದ ದಿನಗಳಲ್ಲಿ ಈ ತಂಡಕ್ಕೆ ಅಂದಿನ ಪಾಲಿಕೆಯ ನೀರಿನ ಅಭಿಯಂತರಾದ ನರೇಶ್ ಶೆಣಿ ಮತ್ತು ಯಜ್ಞೇಶ್ ಅವರು ನೀರಿನ ಪೈಪ್‌ಲೈನ್ ನೀಡುವಲ್ಲಿ ಸಹಾಯ ಮಾಡಿದ್ದರು. ಗಿಡಗಳನ್ನು ಅರಣ್ಯ ಇಲಾಖೆಯ ಅಂದಿನ ಡಿ.ಎಫ್.ಒ ದಿನೇಶ್ ಮತ್ತು ಎ.ಸಿ.ಎಫ್.ಒ ಪ್ರವೀಣ್ ಶೆಟ್ಟಿ ಅವರು ನೀಡಿದ್ದರು. ಪ್ರಸ್ತುತ ಈ ತಂಡ ತಮ್ಮದೇ ಖರ್ಚಿನಲ್ಲಿ ಗೊಬ್ಬರ, ನೀರು, ಪರಿಸರ ಕಳಕಳಿಯ ಫಲಕಗಳನ್ನು ಅಳವಡಿಸಿ, ಇತರ ನಿರ್ವಹಣಾ ಸಾಮಗ್ರಿಗಳನ್ನು ಬಳಸಿ ಸುಂದರವಾಗಿ ಪರಿಸರವನ್ನು ಕಾಪಾಡುತ್ತಿದ್ದಾರೆ.

ಕ್ರೀಡಾಳುಗಳು, ವಾಕಿಂಗ್ ಮಾಡುವವರು ಮತ್ತು ಮೈದಾನಕ್ಕೆ ಬರುವ ಸಾರ್ವಜನಿಕರು ಪ್ಲಾಸ್ಟಿಕ್, ಕಸಗಳನ್ನು ಅಲ್ಲಲ್ಲಿ ಎಸೆಯದೆ ಇಟ್ಟಿರುವ ಕಸದ ಬುಟ್ಟಿಯಲ್ಲಿ ಹಾಕಬೇಕು. ಮೈದಾನ ಹಾಗೂ ಸುತ್ತಲಿನ ಪರಿಸರದಲ್ಲಿ ಅಸಾಮಾಜಿಕ ಚಟುವಟಿಕೆಗಳು ನಡೆಯದಂತೆ ತಡೆಯುವುದು ಈ ಹಸಿರು ಅಭಿಯಾನದ ಮುಖ್ಯ ಉದ್ದೇಶ. ಬಿಡುವಿದ್ದರೆ ಪರಿಸರ ಪ್ರೇಮಿಗಳು ಸ್ವಯಂಸೇವಕರಾಗಿ ನಮ್ಮ ತಂಡದವರೊಂದಿಗೆ ದಿನ ನಿತ್ಯ ಅಥವಾ ಭಾನುವಾರ ಗಾರ್ಡನ್ ನಿರ್ವಹಣೆಗೆ ಕೈ ಜೋಡಿಸಬಹುದು.-ರವಿರಾಜ್ ಶೆಟ್ಟಿ, ಖಾಸಗಿ ಟ್ರಾವೆಲ್ ಕಂಪನಿ ಉದ್ಯೋಗಿ

ಪ್ರಸ್ತುತ ದಿನಗಳಲ್ಲಿ ಪರಿಸರ ಕಾಳಜಿ, ನಿರ್ವಹಣೆ ಎಲ್ಲರ ಕರ್ತವ್ಯ. ಉತ್ತಮ ಆರೋಗ್ಯದೊಂದಿಗೆ ಸುಂದರ, ಸ್ವಚ್ಛ ಪರಿಸರಕ್ಕಾಗಿ ಎಲ್ಲರೂ ಶ್ರಮ ವಹಿಸಲೇಬೇಕು. ಮುಖ್ಯವಾಗಿ ಯುವಜನತೆ ಪರಿಸರ ಸಂರಕ್ಷಣೆ ಬಗೆಗೆ ಆಸಕ್ತಿ ತೋರಿಸಬೇಕು.-ಶ್ರೀಕುಮಾರ್, ಇನ್ಫೋಸಿಸ್‌ನ ಸೇಫ್ಟಿ ವಿಭಾಗದ ನಿವೃತ್ತ ಇಂಜಿನಿಯರ್

ಪರಿಸರ ಸಂರಕ್ಷಣೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಸದಾ ಪ್ರೋತ್ಸಾಹ ನೀಡಲಿದೆ. ಪರಿಸರ ಸಂರಕ್ಷಣೆಗೆ ಕೊಡುಗೆ ನೀಡುತ್ತಿರುವ ಉತ್ಸಾಹಿ ತಂಡದ ಸದಸ್ಯರನ್ನು ಗೌರವಿಸುವ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಆಯೋಜಿಸುವ ಚಿಂತನೆ ಇದೆ.-ಪ್ರದೀಪ್ ಡಿಸೋಜ, ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net