

ವಿಕ್ರಮ ನಾಡಿಗೇರ ಧಾರವಾಡ
ಅಲ್ಲಿ ಎತ್ತ ನೋಡಿದರೂ ನಾನಾ ಬಣ್ಣಗಳ ಪುಷ್ಪಗಳದ್ದೇ ಲೋಕ…ಎಲ್ಲರನ್ನೂ ಸೆಳೆಯುವ ಬಣ್ಣ ಬಣ್ಣದ ಅಲಂಕಾರಿಕ ಪುಷ್ಪಗಳ ಸಂಗ್ರಹವೇ ಕಣ್ಣಿಗೆ ರಾಚುತ್ತಿದ್ದವು. ಇದರ ಜತೆಗೆ ಆರೋಗ್ಯ ಹಾಗೂ ಸೌಂದರ್ಯವರ್ಧಕ ಔಷಧೀಯ ಸಸ್ಯಗಳ ಸಮಾಗಮವಾಗಿತ್ತು.
ಈ ಮನಮೋಹಕ ದೃಶ್ಯಗಳು ಕಂಡು ಬಂದಿದ್ದು ನಗರದ ಕೃಷಿ ವಿಶ್ವ ವಿದ್ಯಾಲಯ ಆವರಣದಲ್ಲಿ ಶನಿವಾರದಿಂದ ಆರಂಭವಾದ ಕೃಷಿ ಮೇಳದಲ್ಲಿ. ಕೃವಿವಿಯ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಫಲ ಪುಷ್ಪ ಪ್ರದರ್ಶನದೊಂದಿಗೆ ವಿಸ್ಮಯಕಾರಿ ಕೀಟ ಪ್ರಪಂಚವೂ ಎಲ್ಲರ ಗಮನ ಸೆಳೆಯುತ್ತಿದೆ.
ಪ್ರದರ್ಶನಕ್ಕೆ ತರಕಾರಿಗಳಲ್ಲಿ ಸಿದ್ಧವಾಗಿರುವ ದೇವಿ ಹಾಗೂ ಎತ್ತುಗಳು ಸ್ವಾಗತ ಕೋರುತ್ತವೆ. ಹಾಗೆ ಮುಂದೆ ಸಾಗಿದರೆ ಕಲ್ಲಂಗಡಿಯಲ್ಲಿ ಅರಳಿದ ಸಂಗೊಳ್ಳಿ ರಾಯಣ್ಣ, ಸುಭಾಷಚಂದ್ರ ಬೋಸ್, ನಟ ಪುನೀತರಾಜಕುಮಾರ, ಅಬ್ದುಲ್ ಕಲಾಂ ಹೀಗೆ ವಿವಿಧ ಕ್ಷೇತ್ರಗಳ ಮಹನೀಯರ ಚಿತ್ರಗಳನ್ನು ಕಾಣಬಹುದು. ಇದಲ್ಲದೆ ತೆಂಗಿನ ಚಿಪ್ಪಿನಿಂದ ತಯಾರಿಸಿದ ಭಾರತದ ನೃತ್ಯ ರೂಪಕಗಳು ಗಮನ ಸೆಳೆದವು.
ಕಣ್ಣಿಗೆ ತಂಪು ನೀಡುವ ವಿವಿಧ ತಳಿಯ ಪುಷ್ಪಗಳು, ಅಲಂಕಾರಿ, ಔಷಧಿ, ಸುಗಂಧ ಸಸ್ಯಗಳು ಗಮನ ಸೆಳೆಯುತ್ತಿವೆ. ಸಣ್ಣ ಪುಟ್ಟ ಕಾಯಿಲೆಗಳಿಗೆ ರಾಮಬಾಣವಾಗಿರುವ ಸಸ್ಯಗಳಾದ ಕರಿನೆಕ್ಕಿ(ಲಕ್ಕಿ), ಹಿಪ್ಪಲಿ, ಅಶ್ವಗಂಧ, ಜರೇನಿಯಂ, ಕೃಷ್ಣ ತುಳಜಿ, ಸರ್ಪಗಂಧ, ನಾಗದಾಳಿ ಸೇರಿ ಬಸಳೆ, ಚಕ್ರಮಣಿ, ದಾಸವಾಳ, ನಿಂಬೆ ಹುಲ್ಲು, ಭೃಂಗರಾಜ, ಜಲಬ್ರಾಹ್ಮಿ, ವಿವಿಧ ತಳಿಗಳ 60ಕ್ಕೂ ಹೆಚ್ಚು ಸಸ್ಯಗಳು ಪ್ರದರ್ಶನದಲ್ಲಿವೆ.
ವಿಸ್ಮಯಕಾರಿ ಕೀಟ ಪ್ರಪಂಚ: ಕೃಷಿ ಮೇಳದಲ್ಲಿ 2 ವರ್ಷಗಳಿಂದ ಆರಂಭವಾಗಿರುವ ವಿಸ್ಮಯಕಾರಿ ಕೀಟ ಪ್ರಪಂಚ ಈ ಬಾರಿ ಮತ್ತಷ್ಟು ಮೆರಗು ಪಡೆದಿದೆ. ಕೀಟಗಳ ಜೀವನ, ವೈವಿಧ್ಯತೆ, ಅವುಗಳ ಜೈವಿಕ ಪಾತ್ರ, ಉಪಯೋಗಗಳನ್ನು ತಿಳಿಸುವ ಉದ್ದೇಶದಿಂದ ಪ್ರದರ್ಶನ ಏರ್ಪಡಿಸಲಾಗಿದೆ. ಜೇನು, ಎರೆಹುಳು, ಹೀಗೆ ಅಂದಾಜು ಸಾವಿರ ಬಗೆಯ ಕೀಟಗಳ ಮೂಲ ಆಕಾರ ರಚನೆ, ಜೀವನ ಕ್ರಿಯೆ ಮತ್ತು ವೈವಿಧ್ಯತೆ ಮಾಹಿತಿ ಜತೆಗೆ ಯಾವ ಕೀಟದಿಂದ ಏನೆಲ್ಲ ಪ್ರಯೋಜನ ಇದೆ ಎಂಬುದನ್ನು ತಿಳಿಸುವ ಪ್ರಯತ್ನ ಮಾಡಲಾಗಿದೆ. ಬಗೆ ಬಗೆಯ ಕೀಟಗಳಿಂದ ಸಿದ್ಧಪಡಿಸಿದ್ದ ಕೀಟೋಲಂಪಿಕ್ಸ್ ಈ ಬಾರಿಯ ವಿಶೇಷವಾಗಿತ್ತು.
ಬಾರ್ಕೋಡ್ ಮಾಹಿತಿ: ಫಲಪುಷ್ಪ ಪ್ರದರ್ಶನದಲ್ಲಿ ಇಡಲಾಗಿದ್ದ ಔಷಧ ಸಸ್ಯ ಸೇರಿ ಇತರ ಸಸ್ಯಗಳ ಮಾಹಿತಿ ಜನರಿಗೆ ಸರಳವಾಗಿ ತಿಳಿಯಲಿ ಎಂಬ ನಿಟ್ಟಿನಲ್ಲಿ ಬಾರ್ಕೋಡ್ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ಸಸ್ಯದ ಬಳಿ ಇಟ್ಟಿದ್ದ ಬಾರ್ಕೋಡ್ ಸ್ಕ್ಯಾನ್ ಮಾಡಿದರೆ ಸಾಕು, ಆ ಸಸಿಯ ಚಿತ್ರ, ವಿಶೇಷತೆ, ಪ್ರಯೋಜನ ಸೇರಿ ಸಮಗ್ರ ಮಾಹಿತಿ ಲಭ್ಯವಾಗುತ್ತದೆ.