ವರ್ಷಾಂತ್ಯಕ್ಕೆ ಹಾರಲಿದೆ ಲೋಹದ ಹಕ್ಕಿ

A metal bird will fly at the end of the year
ವಿಜಯಪುರ ನಗರ ಹೊರವಲಯದ ಬುರಾಣಪುರ ಬಳಿ ನಿರ್ಮಾಣಗೊಳ್ಳುತ್ತಿರುವ ವಿಮಾನ ನಿಲ್ದಾಣದ ವಿಹಂಗಮ ನೋಟ.
Published on

ಪರಶುರಾಮ ಭಾಸಗಿ
ವಿಜಯಪುರ:
ಐತಿಹಾಸಿಕ ಜಿಲ್ಲೆಯ ಮಹತ್ವಾಕಾಂಕ್ಷಿ ವಿಮಾನ ನಿಲ್ದಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ವರ್ಷಾಂತ್ಯಕ್ಕೆ ಗುಮ್ಮಟದ ಗ್ಯಾಲರಿಯಲ್ಲಿ ‘ಲೋಹದ ಹಕ್ಕಿಯ’ ಹಾರಾಟದ ಸದ್ದು ಪ್ರತಿಧ್ವನಿಸಲಿದೆ !

ಹೌದು, ಅಂದುಕೊಂಡಂತೆ ಕಾಮಗಾರಿಗೆ ವೇಗ ನೀಡಿದ್ದೇ ಆದಲ್ಲಿ ಇಷ್ಟೊತ್ತಿಗೆ ವಿಮಾನ ಹಾರಾಟ ನಡೆಸಬೇಕಿತ್ತು. ಆದರೆ, ತಾಂತ್ರಿಕ ತೊಂದರೆಯಿಂದಾಗಿ ಕಾಮಗಾರಿ ವಿಳಂಬವಾಗುತ್ತಿದೆ. ಮೂಲ ಯೋಜನೆಗೆ ಮತ್ತಷ್ಟು ಕಾಮಗಾರಿಗಳು ಸೇರ್ಪಡೆಗೊಳ್ಳುತ್ತಿವೆ. ಹೀಗಾಗಿ ಯೋಜನೆ ಹೊಸ ರೂಪ ಪಡೆಯುತ್ತಲೇ ಇದೆ. ಇದೀಗ ನೈಟ್ ಲ್ಯಾಂಡಿಂಗ್‌ಗೂ ಅವಕಾಶ ಕಲ್ಪಿಸಲಾಗುತ್ತಿದ್ದು, ಹೆಚ್ಚಿನ ಅನುದಾನದ ಅವಶ್ಯಕತೆ ಇದೆ. ಅದಾಗ್ಯೂ ಡಿಸೆಂಬರ್-2023ರಷ್ಟೊತ್ತಿಗೆ ವಿಮಾನ ಹಾರಾಟ ನಡೆಸಲು ಸಿದ್ಧತೆ ಕೈಗೊಳ್ಳಲಾಗಿದೆ. ಆ ಮೂಲಕ ಬಹುದಿನದ ಕನಸೊಂದು ಸಾಕಾರಗೊಳ್ಳಲು ಇನ್ನೂ ನಾಲ್ಕೈದು ತಿಂಗಳು ಕಾಯಲೇಬೇಕು.

ವಿಳಂಬಕ್ಕೆ ಕಾರಣವೇನು?

ಈ ಮೊದಲು ವಿಮಾನ ನಿಲ್ದಾಣ ಕಾಮಗಾರಿಯನ್ನು ಎಟಿಆರ್-72 ಮಾದರಿ ವಿಮಾನಗಳ ಹಾರಾಟಕ್ಕೆ ಅನುಗುಣವಾಗುವಂತೆ ನಿರ್ಮಾಣ ಮಾಡಲು 2020 ಜುಲೈ 23ರಂದು ಅನುಮೋದನೆ ನೀಡಲಾಗಿತ್ತು. ಆ ಪ್ರಕಾರ ಗುತ್ತಿಗೆದಾರರನ್ನು ಲೋಕೋಪಯೋಗಿ ಇಲಾಖೆಯಿಂದ ನೇಮಿಸಲಾಗಿತ್ತು. ಕಾಮಗಾರಿ ಪ್ರಗತಿಯಲ್ಲಿರುವಾಗಲೇ ವಿಮಾನ ನಿಲ್ದಾಣವನ್ನು ಎಟಿಆರ್-72 ವಿಮಾನಗಳ ಹಾರಾಟಕ್ಕೆ ಬದಲಾಗಿ ಏರ್‌ಬಸ್-320 ಮಾದರಿ ವಿಮಾನಗಳ ಹಾರಾಟಕ್ಕೆ ಅನುಕೂಲವಾಗುವಂತೆ ಉನ್ನತೀಕರಿಸಲು ನಿರ್ಧರಿಸಿದ ಕಾರಣ ವಿಮಾನ ನಿಲ್ದಾಣದ ವಿನ್ಯಾಸ, ಅಂದಾಜು ತಯಾರಿಕೆ, ಸಂಚಾರ ಬೇಡಿಕೆ ಇತ್ಯಾದಿ ವರದಿಗಳನ್ನು ತಯಾರಿಸಿದ ನಂತರ 2022 ಅ.28ರಂದು ಅನುಮೋದನೆ ನೀಡಲಾಯಿತು. ಹೀಗಾಗಿ ಕಾಮಗಾರಿ ವಿಳಂಬವಾಯಿತು.

ಸದ್ಯದ ಸ್ಥಿತಿಗತಿ

ವಿಮಾನ ನಿಲ್ದಾಣ ಕಾಮಗಾರಿಯನ್ನು ಜನವರಿ-2021ರಿಂದ ಪ್ರಾರಂಭಿಸಿದ್ದು, 2023 ಜುಲೈ ಅಂತ್ಯದಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿತ್ತು. ಈ ಹಿಂದಿನ ಬಿಜೆಪಿ ಸರ್ಕಾರದ 2022ರ ಅಂತ್ಯಕ್ಕೆ ಯೋಜನೆ ಪೂರ್ಣಗೊಳಿಸುವ ಭರವಸೆ ನೀಡಲಾಗಿತ್ತು. ಬಳಿಕ ಫೆ. 2023ರೊಳಗೆ ಯೋಜನೆ ಪೂರ್ಣಗೊಳಿಸುವುದಾಗಿ ಹೇಳಲಾಗಿತ್ತು. ಆದರೆ, ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿಲ್ಲ.

ಕಾಮಗಾರಿಗೆ ಒಟ್ಟು 347.92 ಕೋಟಿ ರೂ.ಮಂಜೂರಾಗಿದ್ದು ಅದರಲ್ಲಿ ಮೊದಲನೇ ಕಂತಿನ ಹಣ ರೂ.222.00 ಕೋಟಿ ಮತ್ತು ಎರಡನೇ ಕಂತಿನ ಹಣ ರೂ.125.00 ಕೋಟಿ ರೂ.ಮಂಜೂರಾಗಿದೆ. ಟ್ಯಾಕ್ಸಿವೇ, ರನ್‌ವೇ, ಅಪ್ರೋನ್, ಐಸೋಲೇಶನ್ ಬೇ, ರಸ್ತೆಯ ಜೋಡಣೆ, ಒಳರಸ್ತೆಗಳು, ಆಂತರಿಕ ರಸ್ತೆ ಮತ್ತು ಇತರೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಸದ್ಯ ವಿಮಾನ ನಿಲ್ದಾಣದ ಭೌತಿಕ ಕಾಮಗಾರಿ ಶೇ.78.12ರಷ್ಟು ಪೂರ್ಣಗೊಂಡಿದ್ದು, ಬಾಕಿ ಕಾಮಗಾರಿ ಅಕ್ಟೋಬರ್ 2023ಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಒಟ್ಟಿನಲ್ಲಿ ಡಿಸೆಂಬರ್ -2023ಕ್ಕೆ ವಿಮಾನ ಹಾರಿಸಲು ನಿರ್ಧರಿಸಿದ್ದಾಗಿ ಅಧಿಕಾರಿಗಳು ತಿಳಿಸುತ್ತಾರೆ.

ಹಿಂದಿನ ಸರ್ಕಾರದಲ್ಲಿ ಏನಾಗಿದೆಯೋ ಅದೆಲ್ಲ ಮುಗಿದು ಹೋದ ಅಧ್ಯಾಯ. ನಮ್ಮ ಸರ್ಕಾರದಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ ವೇಗ ನೀಡಲಾಗುತ್ತಿದೆ. ಇನ್ನೂ 80 ಕೋಟಿ ರೂ.ಅನುದಾನದ ಅವಶ್ಯಕೆ ಇದ್ದು, ಹಣಕಾಸು ಇಲಾಖೆಗೆ ಕೋರಿಕೊಳ್ಳಲಾಗಿದೆ. ಯೋಜನೆಯಲ್ಲಿ ನೈಟ್‌ಲ್ಯಾಂಡಿಂಗ್ ವ್ಯವಸ್ಥೆ ಇರಲಿಲ್ಲ. ಇದೀಗ ಅದನ್ನೂ ಸೇರ್ಪಡೆಗೊಳಿಸಲು ಸೂಚಿಸಲಾಗಿದೆ. ಆದಷ್ಟು ಬೇಗ ಯೋಜನೆ ಪೂರ್ಣಗೊಳಿಸಲಾಗುವುದು.
ಎಂ.ಬಿ. ಪಾಟೀಲ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net