

ರಾಯಚೂರು: ಶರಣರು ಮಾನವ ಜನ್ಮದಲ್ಲಿ ಜ್ಞಾನದಿಂದ ಯೋಗಿಗಳಾಗಿ ಮಾನವ ಕುಲಕ್ಕೆ ಒಳಿತಾಗಲಿ ಎಂದು ತಮ್ಮ ಸಂದೇಶಗಳ ಮೂಲಕ ಒಳ್ಳೆಯ ದಾರಿಯನ್ನು ಹೇಳಿ ಕೊಟ್ಟಿದ್ದಾರೆ ಎಂದು ಜಿ.ಪಂ. ಮುಖ್ಯ ಯೋಜನಾಕಾರಿ ಡಾ.ಟಿ.ರೋಣಿ ಹೇಳಿದರು.
ಸ್ಥಳೀಯ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತದಿಂದ ಶುಕ್ರವಾರ ಹಮ್ಮಿಕೊಂಡಿದ್ದ ವೇಮನ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವೇಮನರು ಸಮಾಜಕ್ಕೆ ನೀಡಿದ ಸಂದೇಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ವೇಮನ ಯೋಗಿಗಳು ನಮಗೆ ದೊಡ್ಡ ಆಸ್ತಿ. ತಮ್ಮ ಕೃತಿ, ಸಂದೇಶಗಳ ಮೂಲಕ ಸಮಾಜದ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆಯನ್ನು ನೀಡಿದ್ದಾರೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ನಾವೇಲ್ಲರೂ ಸಾಗಬೇಕು ಎಂದು ಹೇಳಿದರು.
ಉಪನ್ಯಾಸಕ ಬಿ.ಗೋವರ್ಧನರೆಡ್ಡಿ ಮಾತನಾಡಿ, ವೇಮನರು ಶ್ರೇಷ್ಠ ವಚನಕಾರರು, ಚಿಂತಕರು ಮತ್ತು ಮಾನವ ಕುಲದ ಅಭಿವೃದ್ಧಿಗಾಗಿ ಶ್ರಮಿಸಿದ್ದರು. ಅವರು ಕೇವಲ ರಡ್ಡಿ ಸಮಾಜಕ್ಕೆ ಸಿಮೀತವಾಗದೆ ಎಲ್ಲ ಜಾತಿ, ಧರ್ಮಗಳಿಗೆ ಆದರ್ಶ ಪ್ರಾಯರಾಗಿದ್ದಾರೆ ಎಂದರು.
ಇದಕ್ಕೂ ಮುಂದೆ ರಡ್ಡಿ ಸಮುದಾಯದಿಂದ ಬಸವೇಶ್ವರ ವೃತ್ತದಿಂದ ರಂಗಮಂದಿರದವರೆಗೆ ವೇಮನ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ನಗರ ಶಾಸಕ ಡಾ.ಶಿವರಾಜ ಪಾಟೀಲ್, ಸಹಾಯಕ ಆಯುಕ್ತೆ ಮಹೆಬೂಬಿ, ನಗರಸಭೆ ಪೌರಾಯುಕ್ತ ಗುರುಸಿದ್ಧಯ್ಯ ಹಿರೇಮಠ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ, ರಡ್ಡಿ ಸಮುದಾಯದ ಮುಖಂಡರಾದ ರಾಮಚಂದ್ರ ರೆಡ್ಡಿ, ಗೋಪಾಲರೆಡ್ಡಿ, ಶರಣರೆಡ್ಡಿ, ಮಹಾಂತೇಶ ಬಿರಾದರ, ಕೇಶವರೆಡ್ಡಿ ಉಪಸ್ಥಿತರಿದ್ದರು.