

ವಿಜಯವಾಣಿ ಸುದ್ದಿಜಾಲ ಉಡುಪಿ
ಯಾರು ನನ್ನನ್ನು ಸಂಪೂರ್ಣವಾಗಿ ಮೊರೆ ಹೋಗುತ್ತಾರೆಯೋ ಅವರನ್ನು ನಾನು ರಕ್ಷಿಸುತ್ತೇನೆ ಎಂದು ಶ್ರೀರಾಮಚಂದ್ರನೇ ತಿಳಿಸಿದ್ದಾನೆ. ಅದೇರೀತಿ ಶ್ರೀಕೃಷ್ಣನೂ ಸಹ ಧರ್ಮ ರಕ್ಷಣೆಗಾಗಿ ಅವತರಿಸಿ ಬರುವುದಾಗಿ ಗೀತೆಯಲ್ಲೇ ಹೇಳಿದ್ದಾನೆ. ಅದನ್ನೇ ರಾಮಾನುಜಾಚಾರ್ಯ ಹಾಗೂ ಮಧ್ವಾಚಾರ್ಯರೂ ಸಹ ಸಂಪೂರ್ಣ ಶರಣಾದರೆ ಮಾತ್ರ ಭಗವಂತನ ಅನುಗ್ರಹ ಲಭಿಸುತ್ತದೆ ಎಂದು ಸಮಾಜಕ್ಕೆ ಪ್ರತಿಪಾದಿಸಿದ್ದಾರೆ. ದೇವರಿಗೆ ಶರಣಾಗತಿ ಆಗದಿರುವುದೇ ಎಲ್ಲ ರೀತಿಯ ಕಷ್ಟ-ನಷ್ಟಗಳಿಗೂ ಕಾರಣ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದಿಂದ ಮುಂದುವರಿದ ಮಾಸಿಕ ಬೃಹತ್ ಗೀತೋತ್ಸವದಲ್ಲಿ ಮಂಗಳವಾರ (ನ.11) ಆಯೋಜಿಸಿದ್ದ ಸಂತ- ಸಂದೇಶ, ಸಂತ -ಸನ್ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ವಿದ್ವಾನ್ ರಂಗ ರಾಮಾನುಜಾಚಾರ್ಯ, ಉದ್ಯಮಿ ಭುವನೇಂದ್ರ ಕಿದಿಯೂರು, ಜಿತೇಶ್ ಕಿದಿಯೂರು ಉಪಸ್ಥಿತರಿದ್ದರು.
ಪುತ್ತಿಗೆ ಮಠದ ವಿದ್ವಾಂಸರು ವೇದಘೋಷ ಪಠಿಸಿದರು. ವಿದ್ವಾನ್ ಡಾ. ಬಿ.ಗೋಪಾಲ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಮಠದ ದಿವಾನ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ್ ತಂತ್ರಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್ ಭಟ್ ಸಹಕರಿಸಿದರು.
ಕಷ್ಟ ಕೊಡೊವುದು ಭಗವಂತನ ಕೆಲಸವಲ್ಲ. ಆದರೆ, ತನ್ನನ್ನು ಮೊರೆ ಹೋಗಿಲ್ಲ ಎನ್ನುವುದನ್ನು ನೆನಪಿಸಲು ಆಗಾಗ ಕಷ್ಟ ನೀಡುತ್ತಾನೆ. ಅನನ್ಯವಾಗಿ ನನ್ನನ್ನು ಯಾರು ಸ್ಮರಿಸುತ್ತಾರೋ ಅವರೆಲ್ಲರ ಯೋಗಕ್ಷೇಮವನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಕುರುಕ್ಷೇತ್ರದಲ್ಲಿ ಯುದ್ಧ ಮಾಡಲಾಗದೆ ಕೈಚೆಲ್ಲಿ ಕುಳಿತ ಅರ್ಜುನನಿಗೆ ಶ್ರೀಕೃಷ್ಣ ಗೀತೆಯ ಮೂಲಕ ಬೋಧಿಸಿದ್ದಾನೆ. | ಸುಗುಣೇಂದ್ರ ತೀರ್ಥ ಶ್ರೀಪಾದರು. ಪುತ್ತಿಗೆ ಮಠ