ಸಾಂತ್ವನ ಕೇಂದ್ರಗಳ ಸಿಬ್ಬಂದಿಗೇ ಸಾಂತ್ವನ ಹೇಳೋರಿಲ್ಲ!

Santwana Kendra
Published on

| ಸೋರಲಮಾವು ಶ್ರೀಹರ್ಷ ತುಮಕೂರು

ನೊಂದ ಮಹಿಳೆಯ ಅಳಲು ಕೇಳಿ ಆಕೆಯ ಜತೆಯಲ್ಲಿ ನಿಂತು ಕಾನೂನು ಪರಿಹಾರ ಕೊಡಿಸುತ್ತಿರುವ ರಾಜ್ಯದ ‘ಸಾಂತ್ವನ ಕೇಂದ್ರ’ಗಳು ಕಳೆದೊಂದು ವರ್ಷದಿಂದ ಅನುದಾನವಿಲ್ಲದೆ ಸೊರಗಿವೆ.

2020ರ ಫೆಬ್ರವರಿಯಲ್ಲಿ ಕೇಂದ್ರಗಳನ್ನು ಮುಚ್ಚಲು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆದೇಶಿಸಿತ್ತು, ಆ ನಂತರ ಸಾರ್ವನಿಕರ ಒತ್ತಡಕ್ಕೆ ಮಣಿದ ಸರ್ಕಾರ ಮುಂದುವರಿಸಲು ಒಪ್ಪಿತ್ತು. ಆದರೆ ಏಪ್ರಿಲ್‌ನಿಂದ ರಾಜ್ಯದ 196 ಕೇಂದ್ರಗಳಿಗೆ ಅನುದಾನ ಬಿಡುಗಡೆಯಾಗದೆ ಮಹಿಳೆಯರ ಕಣ್ಣೀರೊರೆಸುವ ಕೇಂದ್ರಗಳ ಸಿಬ್ಬಂದಿಗೆ ವೇತನವಿಲ್ಲದೆ, ಬಾಡಿಗೆ ಕಟ್ಟಲಾಗದೆ ಬಾಗಿಲು ಮುಚ್ಚುವ ಸ್ಥಿತಿಗೆ ಬಂದಿವೆ. ಮಾತೃಶ್ರೀ ಯೋಜನೆ ಹಾಗೂ ವರದಕ್ಷಿಣೆ, ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ, ಲೈಂಗಿಕ ಕಿರುಕುಳಕ್ಕೊಳಗಾದ ನೊಂದ ಮಹಿಳೆಯರಿಗೆ ಕಾನೂನು ನೆರವು ಹಾಗೂ ಆಪ್ತಸಮಾಲೋಚನೆ ಮೂಲಕ ಮಹಿಳೆಯರ ಪಾಲಿನ ತವರುಮನೆ ಎನಿಸಿಕೊಂಡಿದ್ದ ಕೇಂದ್ರಗಳು ಮುಚ್ಚುವ ಆತಂಕವಿದೆ.

2001ರಿಂದ 196 ಕೇಂದ್ರಗಳಲ್ಲಿ ರಾಜ್ಯದ ಪ್ರತಿ ತಾಲೂಕಿನಲ್ಲಿಯೂ ಸರ್ಕಾರದ ನೆರವಿನೊಂದಿಗೆ ಸರ್ಕಾರೇತರ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲಾ ಕೇಂದ್ರದಲ್ಲಿಯೂ ಕನಿಷ್ಠ 5 ಜನ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯಾದ್ಯಂತ 1 ಸಾವಿರಕ್ಕೂ ಹೆಚ್ಚು ಜನರು ಕೆಲಸ ಕಳೆದುಕೊಂಡು ಕಂಗಾಲಾಗಿದ್ದಾರೆ.
ಸರ್ಕಾರದ ಈ ಯೋಜನೆಗೆ ವಾರ್ಷಿಕ 82.32 ಕೋಟಿ ರೂ., ಖರ್ಚು ಮಾಡಲು ಬಜೆಟ್‌ನಲ್ಲಿಯೇ ಅವಕಾಶ ನೀಡಿದ್ದು ಹಣ ನೀಡದಿರುವುದು ಯೋಜನೆಯನ್ನೇ ಹಳ್ಳ ಹಿಡಿಸಿದೆ.

ಮಾಸಿಕ 53500ರೂ. ಅನುದಾನ: ಸಾಂತ್ವನ ಕೇಂದ್ರಗಳಿಗೆ ಮಾಸಿಕ 53500 ರೂ. ಅನುದಾನವನ್ನು ಪ್ರತಿ ಕೇಂದ್ರಕ್ಕೂ ಸರ್ಕಾರ 2001ರಿಂದಲೂ ನೀಡುತ್ತಿದೆ, ಆಪ್ತ ಸಮಾಲೋಚಕರಿಗೆ 15 ಸಾವಿರ, ಮೂವರು ಸಿಬ್ಬಂದಿಗೆ ತಲಾ 10 ಸಾವಿರ, ಕಚೇರಿ ಬಾಡಿಗೆಗೆ 6 ಸಾವಿರ ರೂ. ಹಾಗೂ ಕಚೇರಿ ನಿರ್ವಹಣೆಗೆ 2500ರೂ. ನೀಡಲಾಗುತ್ತಿದೆ. ಗ್ರಾಮೀಣ ಭಾಗದ ಕೇಂದ್ರಗಳಿಗೆ 52500ರೂ. ನೀಡಲಾಗುತ್ತಿದ್ದು ಕಳೆದ ಏಪ್ರಿಲ್‌ನಿಂದ ನಯಾಪೈಸೆ ಈ ಕೇಂದ್ರಗಳಿಗೆ ಬಂದಿಲ್ಲ.
 
ಸಾಂತ್ವನ ಕೇಂದ್ರ ಮುಂದುವರಿಸುವ ಅಥವಾ ಮುಚ್ಚುವ ಬಗ್ಗೆ ಸರ್ಕಾರದಿಂದ ಸ್ಪಷ್ಟ ಆದೇಶವಿಲ್ಲ, ಇಲಾಖೆಯ ಭಾಗ್ಯಲಕ್ಷ್ಮೀ ಸೇರಿ ಇತರ ಕಾರ್ಯಕ್ರಮದಲ್ಲಿ ಉಳಿಕೆ ಹಣವನ್ನು ಸಾಂತ್ವನ ಕೇಂದ್ರದ ಅನುದಾನಕ್ಕೆ ಹೊಂದಿಸುವ ಬಗ್ಗೆ ಸರ್ಕಾರದ ಹಂತದಲ್ಲಿ ಚಿಂತನೆಯಿದ್ದು ಎಲ್ಲ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತಿದೆ.

| ಎಸ್.ನಟರಾಜು  ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ಮಹಿಳೆಯರ ನೋವಿಗೆ ನ್ಯಾಯ ಒದಗಿಸುವಲ್ಲಿ ಸಾಂತ್ವನ ಕೇಂದ್ರಗಳು ಕಳೆದ 18 ವರ್ಷದಿಂದ ಕಾರ್ಯನಿರ್ವಹಿಸಿವೆ. ಇದನ್ನೇ ನಂಬಿ ಕೆಲಸ ಮಾಡುವವರ ಬದುಕು ಬೀದಿಗೆ ಬಂದಿದೆ, ಕೂಡಲೇ ಸರ್ಕಾರ ಅನುದಾನ ಬಿಡುಗಡೆ ಮೂಲಕ ಜನಸ್ನೇಹಿ ಕಾರ್ಯಕ್ರಮ ಉಳಿಸಬೇಕು.

| ಬಿ.ಎಸ್. ನಂದಕುಮಾರ್  ಸಮಾಜ ಕಾರ್ಯಕರ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net