

ಮೈಸೂರು: ತಮ್ಮ ವಿದ್ಯಾರ್ಥಿಗಳಿಂದ ಉತ್ತಮ ಪ್ರಬಂಧ ಹೊರತರುವಲ್ಲಿ ಮಾರ್ಗದರ್ಶಕರ ಶ್ರಮ ಅಗತ್ಯ ಎಂದು ಸಮಾಜಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಜಿ.ಕೆ.ಕಾರಂತ್ ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರವು ಸಾಮಾಜಿಕ ವಿಜ್ಞಾನದಲ್ಲಿ ಸಂಶೋಧನಾ ವಿಧಾನ ಕುರಿತು ಸೋಮವಾರದಿಂದ ಆರು ದಿನಗಳ ಕಾಲ ಆಯೋಜಿಸಿರುವ ಕಾರ್ಯಗಾರದಲ್ಲಿ ಮಾತನಾಡಿದರು.
ನಾವು ಆರಿಸುವ ವಿಷಯದಲ್ಲಿ ಮೂಡುವ ಪ್ರಶ್ನೆಯ ಬಗ್ಗೆ ಸಂಶೋಧನೆ ಮಾಡಬೇಕು. ಈ ರೀತಿ ಪ್ರಶ್ನೆಗಳು ಮೂಡುವಂತೆ ಮಾಡುವ ಜವಾಬ್ದಾರಿ ಮಾರ್ಗದರ್ಶಕರದ್ದು, ತಮ್ಮ ವಿದ್ಯಾರ್ಥಿಗಳಿಂದ ಉತ್ತಮ ಪ್ರಬಂಧ ಹೊರತರುವಲ್ಲಿ ಅವರ ಶ್ರಮ ಅಗತ್ಯ. ಜನಸಮುದಾಯ ಹಾಗೂ ಪರಿಸರದ ಜೀವಪರ ಹಿನ್ನೆಲೆಯಲ್ಲಿ ಸಂಶೋಧನೆಗಳು ನಡೆಯಬೇಕು ಎಂದು ಸಲಹೆ ನೀಡಿದರು.
ಕುಲಸಚಿವೆ ವಿ.ಆರ್.ಶೈಲಜಾ ಮಾತನಾಡಿ, ಪ್ರತೀ ವರ್ಷ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆಯುವವರ ಸಂಖ್ಯೆ ಗಣನೀಯ ಏರಿಕೆ ಕಂಡಿದೆ. ಅದರಲ್ಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪದವಿ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಪ್ರೊ.ಆರ್.ಇಂದಿರಾ ಮಾತನಾಡಿ, ಗುಣಮಟ್ಟದ ಬರಹಕ್ಕಾಗಿ ವಿಷಯದ ದಾಖಲೀಕರಣ, ಚರ್ಚೆ, ಪರಾಮರ್ಶೆ ಅಗತ್ಯ. ನಮ್ಮ ವಿಷಯದ ಹೊರತಾಗಿ ಇತರ ವಿಷಯದ ಬಗ್ಗೆಯೂ ತಿಳಿಯುವ ಆಸಕ್ತಿ ಇರಬೇಕು ಎಂದರು.
ಗಾಂಧಿ ಅಧ್ಯಯನ ವಿಭಾಗದ ನಿರ್ದೇಶಕ ಪ್ರೊ.ಎಸ್.ನರೇಂದ್ರ ಕುಮಾರ್, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್ ಇದ್ದರು.