ಅಧಿಕಾರಿಗಳ ಗೈರು ಸಭೆ ರದ್ದುಪಡಿಸಿ ಹೊರ ನಡೆದ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಸದಸ್ಯೆ

IMG-20231026-WA0130
Published on
ರಾಮನಗರ:  ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ (ಎನ್‌ಸಿಎಸ್‌ಸಿ) ಗುರುವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಗೆ ಜಿಲ್ಲಾಧಿಕಾರಿ ಸೇರಿ ಹಲವರು ಗೈರಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಆಯೋಗದ ಸದಸ್ಯೆ ಡಾ. ಅಂಜು ಬಾಲಾ ಸಭೆ ರದ್ದುಗೊಳಿಸಿ ಹೊರ ನಡೆದ ಘಟನೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಿಗಧಿ ಆಗಿತ್ತು. ಸಭೆಗೆ ಬಂದ ಸದಸ್ಯೆ ಡಾ.ಅಂಜು ಬಾಲಾ ಅವರನ್ನು ಜಿಪಂ ಸಿಇಓ ದಿಗ್ವಿಜಯ್ ಬೋಡ್ಕೆ ಬರ ಮಾಡಿಕೊಂಡರು. ಆದರೆ, ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ  ಗೈರಾಗಿದ್ದರು.  ಇದರಿಂದ ಆಕ್ರೋಶಗೊಂಡ ಸದಸ್ಯೆ ಸಭೆಯನ್ನು ರದ್ದುಮಾಡಿ ಸಭೆಯಿಂದ ಹೊರ ನಡೆದರು. 
ಸಭೆ ರದ್ದಾದ ನಂತರ ಬಂದ ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸದಸ್ಯೆ, ಯಾಕೆ ಸಭೆಗೆ ಬರಲಿಲ್ಲ. ನಿಮ್ಮ ಊರಿಗೆ ಬಂದಿರುವ ನನ್ನನ್ನು ನೀವು ಸ್ವಾಗತಿಸಬೇಕೇ ಅಥವಾ ನಾನೇ ನಿಮಗೆ ಸ್ವಾಗತಿಸಬೇಕೇ? ಎಂದು ಖಾರವಾಗಿ ಪ್ರಶ್ನಿಸಿದರು.
ಈ ವೇಳೆ ಜಿಲ್ಲಾಧಿಕಾರಿ ನೀಡಿದ ಸಮಜಾಯಿಷಿಯಿಂದ ತೃಪ್ತರಾಗದ ಸದಸ್ಯೆ ತಮ್ಮ ಕಾರಿನತ್ತ ನಡೆದರು.
ಈ ವೇಳೆಯೂ ಸಹ ಜಿಲ್ಲಾಧಿಕಾರಿ ಸದಸ್ಯೆ ಅವರ ಬಳಿ ಕ್ಷಮೆ ಕೋರಿದರೂ ಸಮಾಧಾನಗೊಳ್ಳದ ಡಾ.ಅಂಜುಬಾಲಾ, ನಮ್ಮದು ಸಂವಿಧಾನದತ್ತ ಆಯೋಗ. ರಾಷ್ಟ್ರಪತಿ ನಮ್ಮನ್ನು ನೇಮಕ ಮಾಡುತ್ತಾರೆ. ಪ್ರಧಾನಿ ಅವರು ನಮ್ಮಿಂದ ಮಾಹಿತಿ ಪಡೆಯುತ್ತಾರೆ. ಸಂಸತ್ತಿಗೆ ನಾವು ಬಾಧ್ಯಸ್ಥರಾಗಿದ್ದೇವೆ. ನಾವಿಲ್ಲಿ ನಿಮ್ಮ ಜೊತೆ ಕಾಫಿ ಕುಡಿದು, ಪಿಕ್‌ನಿಕ್ ಮಾಡಲು ಬಂದಿಲ್ಲ. ಜಿಲ್ಲೆಯಲ್ಲಿ ಸಮುದಾಯಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಬಂದಿರುವೆ. ಆಯೋಗಕ್ಕೆ ನಿಮ್ಮಷ್ಟು ಅಗೌರವವನ್ನು ಬೇರೆಲ್ಲೂ ತೋರಿಸಿಲ್ಲ. ರಾಜ್ಯದ ಬೇರೆ ಕಡೆಯೂ ನಾನು ಸಭೆ ನಡೆಸಿದ್ದೇನೆ. ಅಲ್ಲಿ ಯಾರೂ ಈ ರೀತಿ ನಡೆದುಕೊಂಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿ, ಬೆಂಗಳೂರಿತ್ತ ಪ್ರಯಾಣ ಬೆಳೆಸಿದರು.
ಇದೇ ವೇಳೆ ಸಭೆಗೆ ತಮಗೆ ಮಾಹಿತಿ ನೀಡದ ಬಗ್ಗೆ  ಜಿಲ್ಲಾ ಜಾಗೃತಿ ಮತ್ತು ಉಸುವಾರಿ ಸಮಿತಿ ಸದಸ್ಯರಾದ ಶಿವಕುಮಾರಸ್ವಾಮಿ, ಡಾ. ಜಿ. ಗೋವಿಂದಯ್ಯ, ವೆಂಕಟೇಶ್, ಹರೀಶ್ ಬಾಲು, ಮುಖಂಡರಾದ ಸುರೇಶ್, ಸತೀಶ್ ಸೇರಿ ಹಲವರು ದೂರು ನೀಡಿದರು.
ಜಿಲ್ಲೆಯಲ್ಲಿ ಪರಿಶಿಷ್ಟರ ಮೇಲೆ ದೌರ್ಜನ್ಯ ಹೆಚ್ಚಳವಾಗಿದ್ದರೂ ಪೊಲೀಸರು ಕ್ರಮ ಕೈಗೊಂಡಿಲ್ಲ. ಜಿಲ್ಲಾಡಳಿತ ಸಹ ಮೌನವಾಗಿದೆ’ ಎಂದು ದೂರಿದರು.  ಆಗ ಎಸ್‌ಪಿ ಮತ್ತು ಡಿಸಿ ಇಬ್ಬರೂ ಅವರನ್ನು ಸಮ್ಮನಾಗಿಸಲು ಯತ್ನಿಸಲು ಮುಂದಾದರು. ಆಗ ಅಂಜು ಅವರು, ‘ಆಯೋಗದ ಸದಸ್ಯೆಯಾಗಿರುವ ನನ್ನ ಜೊತೆಯೇ ಇವರು ಈ ರೀತಿ ನಡೆದುಕೊಂಡಿದ್ದಾರೆಂದರೆ, ಇನ್ನು ನಿಮ್ಮನ್ನು ಯಾವ ರೀತಿ ಕಾಣುತ್ತಿರಬೇಕು. ನೀವ್ಯಾರು ಭಯಪಡಬೇಡಿ. ಏನೇ ತೊಂದರೆಯಾದರೂ ನನಗೆ ತಿಳಿಸಿ’ ಎಂದು ತಮ್ಮ ವಿಸಿಟಿಂಗ್ ಕಾರ್ಡ್ ಕೊಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net