

ಕುಶಾಲನಗರ:
ಸೂಕ್ತ ವೇದಿಕೆ ಸಿಕ್ಕಿದರೆ ಪೊಲೀಸರೂ ತಮ್ಮಲ್ಲಿನ ಸುಪ್ತ ಪ್ರತಿಭೆ ಹೊರಹಾಕಬಲ್ಲರು ಎಂದು ಹೆಚ್ಚುವರಿ ಎಸ್.ಪಿ. ಕೆ. ಸುಂದರ್ ರಾಜ್ ಅಭಿಪ್ರಾಯಪಟ್ಟರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕೊಡಗು ಪೊಲೀಸ್ ಇಲಾಖೆ ಹಾಗೂ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತಾಶ್ರಯದಲ್ಲಿ ಶನಿವಾರ ಕುಶಾಲನಗರದ ಕಲಾಭವನದಲ್ಲಿ ನಡೆದ ಪೊಲೀಸರ ಜಿಲ್ಲಾ ಮಟ್ಟದ ಗಾಯನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಶಿಸ್ತಿನ ಇಲಾಖೆಯಾಗಿರುವ ಪೊಲೀಸ್ ಇಲಾಖೆ ಎಂದರೆ ಕ್ರೀಡೆ ಎನ್ನುವ ನಂಬಿಕೆ ಇದೆ. ಆದರೆ ಪೊಲೀಸ್ ಇಲಾಖೆಯಲ್ಲೂ ಪ್ರತಿಭಾವಂತರು ಇದ್ದಾರೆ. ಇದನ್ನು ಹೊರತರಲು ಸೂಕ್ತ ವೇದಿಕೆ ಅಗತ್ಯವಿದೆ. ಕುಶಾಲನಗರ ಕಸಾಪ ಮೂಲಕ ಇದೀಗ ನಡೆದಿರುವ ವಿನೂತನ ಪ್ರಯತ್ನ ಮೂಲಕ ಪೊಲೀಸರ ಪ್ರತಿಭೆ ಹೊರಬರಲು ಸಹಾಯಕವಾಗುತ್ತದೆ. ಇದು ಈ ರೀತಿಯ ಮೊದಲ ಕಾರ್ಯಕ್ರಮ ಆದ ಕಾರಣ ಸ್ಪರ್ಧೆಯಲ್ಲಿ ಪೊಲೀಸರ ಸಂಖ್ಯೆ ಕಡಿಮೆ ಇದೆ. ಮುಂದಿನ ದಿನಗಳಲ್ಲಿ ಇದು ಹೆಚ್ಚಾಗಬಹುದು. ಬೇರೆ ತಾಲೂಕುಗಳಲ್ಲೂ ಇಂಥ ಕಾರ್ಯಕ್ರಮ ಮಾಡುವ ಚಿಂತನೆ ನಡೆಸಬಹುದು ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಕೇಶವ ಕಾಮತ್ ಮಾತನಾಡಿ, ದಿನದ 24 ಗಂಟೆಯೂ ಕೆಲಸ ಮಾಡುತ್ತಾ ಸಮಾಜಕ್ಕೆ ರಕ್ಷಣೆ ನೀಡುವ ಸೇವೆ ಪೊಲೀಸ್ ಇಲಾಖೆ ಮಾಡುತ್ತದೆ. ಪೊಲೀಸರು ಇಲ್ಲದ ಸಮಾಜ ಕಲ್ಪಿಸಿಕೊಳ್ಳಲು ಕೂಡ ಕಷ್ಟ. ಮಾದಕ ವಸ್ತು ನಿಯಂತ್ರಣಕ್ಕೆ ಕೊಡಗು ಪೊಲೀಸ್ ಇಲಾಖೆ ಪಣ ತೊಟ್ಟಿದೆ. ರಾಜ್ಯಕ್ಕೆ ಮಾದರಿ ಇಲಾಖೆ ಆಗುವ ನಿಟ್ಟಿನಲ್ಲಿ ಕೆಲಸ ಮಾಡಲಿ ಎಂದರಲ್ಲದೆ ವೃತ್ತಿ ಜತೆ ಪ್ರವೃತ್ತಿ ಸೇರಿಕೊಂಡಾಗ ಜೀವನಕ್ಕೆ ಉತ್ಸಾಹ ಸಿಗುತ್ತದೆ. ಪೊಲೀಸರು ಕೂಡ ಕಸಾಪ ಸದಸ್ಯರಾಗುವ ಮೂಲಕ ಕನ್ನಡ ಸೇವೆ ಮಾಡುವಂತಾಗಲಿ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಉಪನ್ಯಾಸಕ ಮೆ.ನಾ. ವೆಂಕಟ್ ನಾಯಕ್, ಸಮಾಜದ ಒಳಿತಿಗಾಗಿ ದುಡಿಯುತ್ತಿರುವ ಪೊಲೀಸರಿಗಾಗಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಹಳೆಯ ಚಲನಚಿತ್ರಗಳಿಗೆ ಮರು ಜೀವ ಕೊಡುವ ಕೆಲಸ ಮಾಡಲಾಗಿದೆ. ಜಾನಪದ ಮತ್ತು ಭಾವಗೀತೆಗಳ ಗಾಯನ ಮೂಲಕ ಪ್ರತಿಭೆ ಹೊರತರುವ ಪ್ರಯತ್ನ ನಡೆದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್. ನಾಗೇಶ್ ಮಾತನಾಡಿ, ಗಡಿಯಲ್ಲಿ ದೇಶ ಕಾಯುವ ಮೂಲಕ ಯೋಧರ ಸೇವೆ ಅನನ್ಯವಾದರೆ, ದೇಶದೊಳಗೆ ಜನ ಸಾಮಾನ್ಯರನ್ನು ಕಾಯುವ ಪೊಲೀಸರು ಪ್ರತಿನಿತ್ಯ ಸ್ಮರಣೀಯರು. ಪೊಲೀಸರಲ್ಲಿ ಮನೋಲ್ಲಾಸ ಮೂಡಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಕುಶಾಲನಗರ ಪ.ಪಂ. ಅಧ್ಯಕ್ಷೆ ಜಯಲಕ್ಷ್ಮೀ ಚಂದ್ರು, ಸೋಮವಾರಪೇಟೆ ವಿಭಾಗದ ಡಿವೈಎಸ್‌ಪಿ ಆರ್.ವಿ. ಗಂಗಾಧರಪ್ಪ, ಉದ್ಯಮಿ ಅಶ್ವಿನಿ ರೈ, ಹೆಚ್.ಎಂ. ರಾಜಶೇಖರ್, ಶಾರದಾ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಶಾಂತಾ ಶ್ರೀಪತಿ, ಕಸಾಪ ಕಾರ್ಯದರ್ಶಿ ನಾಗರಾಜ, ಟಿ.ವಿ. ಶೈಲಾ, ಕೋಶಾಧಿಕಾರಿ ಕೆ.ವಿ. ಉಮೇಶ್ ಇದ್ದರು.