

ಬೆಂಗಳೂರು: ಮೇಕೆದಾಟು ಪಾದಯಾತ್ರೆಗೆ ಭರದಿಂದ ಸಿದ್ಧತೆ ನಡೆಯುತ್ತಿದ್ದು, ಪಾದಯಾತ್ರೆಗೆ ಹೆಚ್ಚಿನ ಜನರನ್ನು ಸೇರಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕಾಲಿಗೆ ಚಕ್ರಕಟ್ಟಿಕೊಂಡಂತೆ ಜನಜಾಗೃತಿ ಅಭಿಯಾನ ನಡೆಸುತ್ತಿದ್ದಾರೆ.
ಮಂಡ್ಯ, ಚಾಮರಾಜನಗರ, ಮೈಸೂರಿನಲ್ಲಿ ಈಗಾಗಲೇ ಅಭಿಯಾನ ನಡೆಸಿರುವ ಡಿಕೆಶಿ, ಇದೀಗ ಬೆಂಗಳೂರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಇಂದು ನಗರದಲ್ಲಿ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ಡಿಕೆಶಿ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರಿಗೆ ಪಕ್ಷದ ಮುಖಂಡರಾದ ಸಲಿಂ ಅಹಮ್ಮದ್, ಎಚ್.ಎಂ.ರೇವಣ್ಣ ಸಾಥ್ ಕೊಟ್ಟರು.
ಕೆಪಿಸಿಸಿ ಕಚೇರಿಯಿಂದ ಗಾಂಧಿ ಪ್ರತಿಮೆ, ರೇಸ್ ಕೋರ್ಸ್ ರಸ್ತೆ, ಮೌರ್ಯ ಹೋಟೆಲ್, ಮೈಸೂರು ಬ್ಯಾಂಕ್ ವೃತ್ತ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಶೇಷಾದ್ರಿ ರಸ್ತೆ ಮೂಲಕ ರಾಜಾಜಿನಗರ ಕ್ಷೇತ್ರದಲ್ಲಿ ಮೇಕೆದಾಟು ಪಾದಯಾತ್ರೆಯ ಜಾಗೃತಿ ಅಭಿಯಾನ ನಡೆಯಿತು. ದಾರಿಯುದ್ದಕ್ಕೂ ಸಾರ್ವಜನಿಕರಿಗೆ ಭಿತ್ತಿಪತ್ರಗಳನ್ನು ನೀಡಿ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡುವಂತೆ ಬೆಂಗಳೂರು ಕಾಂಗ್ರೆಸ್ ಪ್ರಚಾರ ಸಮಿತಿಯು ಮನವಿ ಮಾಡಿತು.
ಕಾಂಗ್ರೆಸ್ ಮುಖಂಡರಾದ ಎಸ್.ಮನೋಹರ್, ಜಿ. ಜನಾರ್ದನ್, ಎ.ಆನಂದ್, ಎಲ್.ಜಯಸಿಂಹ, ರವಿ, ಶೇಖರ್, ಪ್ರಕಾಶ್, ಪುಟ್ಟರಾಜ, ಚಂದ್ರಶೇಖರ, ಅನಿಲ್ ಕುಮಾರ್, ನವೀನ, ತೇಜಸ್, ವೆಂಕಟೇಶ್ ಮತ್ತಿತರರು ಪಾಲ್ಗೊಂಡಿದ್ದರು.