ಮೀಸಲಾತಿ ಕುರಿತು ಚರ್ಚಿಸಲು ಸಭೆ ಕರೆಯಬೇಕು, ಬಸವಜಯ ಮೃತ್ಯುಂಜಯ ಸ್ವಾಮೀಜಿ

IMG-20230615-WA0015.jpg
Published on

ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡುವ ವಿಚಾರವಾಗಿ ನಮ್ಮೊಂದಿಗೆ ಚರ್ಚಿಸಲು ಸಿಎಂ ಸಿದ್ದರಾಮಯ್ಯ ಶೀಘ್ರ ಆಡಳಿತಾತ್ಮಕ ಸಭೆ ಕರೆಯಬೇಕು ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.
 ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಮೀಸಲಾತಿ ಹೋರಾಟ ಒಂದು ಹಂತಕ್ಕೆ ತಲುಪಿದ್ದ ವೇಳೆ ವಿಧಾನಸಭೆ ಚುನಾವಣೆ ಎದುರಾಯಿತು. ಈಗ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹಾಗಾಗಿ ನಾವು ಕಾನೂನು ಘಟಕದೊಂದಿಗೆ ಸಭೆ ನಡೆಸಿ, ಮುಂದಿನ ಹೋರಾಟದ ಕುರಿತು ಚರ್ಚಿಸಿದ್ದೇವೆ. ಜತೆಗೆ ಮುಖ್ಯಮಂತ್ರಿ ಭೇಟಿಯಾಗಿ ಹಕ್ಕೊತ್ತಾಯ ಮಂಡಿಸುವ ಕುರಿತು ನಿರ್ಣಯ ಕೈಗೊಂಡಿದ್ದೇವೆ ಎಂದರು.
 ನಮ್ಮ ಸಮುದಾಯದ ವಿದ್ಯಾರ್ಥಿಗಳು ಜನಗಣತಿ ಮತ್ತು ಶಾಲಾ ದಾಖಲಾತಿ ಹಾಗೂ ಉದ್ಯೋಗ ಪಡೆಯುವ ವೇಳೆ ಯಾವುದನ್ನು ಬರೆಸಬೇಕು ಎಂಬ ಗೊಂದಲದಲ್ಲಿದ್ದಾರೆ. ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ಸ್ವಾಮೀಜಿಗಳೊಂದಿಗೆ ಚರ್ಚಿಸಿದ್ದೀರಿ. ಅದರಂತೆ ನಮ್ಮ ಸಮುದಾಯದ ಸಭೆ ಕರೆಯಬೇಕು. ಕೇಂದ್ರದ ಒಬಿಸಿ ಮೀಸಲಾತಿ ಪಟ್ಟಿಯಲ್ಲಿ ಲಿಂಗಾಯತ ಸಮುದಾಯದ ಒಳಪಂಗಡಗಳನ್ನು ಸೇರಿಸುವ ವಿಚಾರವಾಗಿ ನಿಮ್ಮ ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೆ ಎಂಬುವುದನ್ನು ತಿಳಿಸಬೇಕು ಎಂದು ಒತ್ತಾಯಿಸಿದರು.
 ಬಿಜೆಪಿ ಸರ್ಕಾರ ನೀಡಿದ 2ಡಿ ಮೀಸಲಾತಿ ವಿಚಾರ ನ್ಯಾಯಾಲಯದಲ್ಲಿದೆ. ಆ ವಿಷಯವಾಗಿ ಮಾತನಾಡುವುದಿಲ್ಲ. ನ್ಯಾಯಾಲಯದ ತೀರ್ಪು ನಾವು ಒಪ್ಪಿಕೊಳ್ಳಲೇಬೇಕು. ಆದರೆ, ಸರ್ಕಾರ ತನ್ನ ನಿಲುವು ತಿಳಿಸಬೇಕು. ಈ ಬಾರಿ ನಮ್ಮ ಸಮುದಾಯ ಕಾಂಗ್ರೆಸ್‌ಗೆ ಆಶೀರ್ವದಿಸಿದ ಹಿನ್ನೆಲೆಯಲ್ಲಿ, ನಮಗೆ ನ್ಯಾಯ ಸಿಗುತ್ತದೆ ಸಂಪೂರ್ಣ ವಿಶ್ವಾಸವಿದೆ ಎಂದರು.
 ಪಂಚಮಸಾಲಿ ಸಮಾಜದ ಗೌರವ ಜಿಲ್ಲಾಧ್ಯಕ್ಷ ಆರ್.ಕೆ.ಪಾಟೀಲ, ನಗರ ಅಧ್ಯಕ್ಷ ರಾಜು ಮಗದುಮ್ಮ, ವಕೀಲರಾದ ಆರ್.ಸಿ.ಪಾಟೀಲ, ಶಿವಪುತ್ರ ಪಟಕಲ್, ಮುಖಂಡರಾದ ಎಸ್.ಬಿ.ಪಾಟೀಲ, ಸತೀಶ ಬಿರಾದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net