

ಚಿಕ್ಕಬಳ್ಳಾಪುರ: ಬೆಂಗಳೂರಿನಲ್ಲಿನ ಪರಿಶ್ರಮ ನೀಟ್ ಅಕಾಡೆಮಿಯಲ್ಲಿ ಶಾಸಕ ಪ್ರದಿಪ್ ಈಶ್ವರ್ ನಡೆಸಿದ್ದಾರೆ ಎನ್ನಲಾದ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ವಿವಾದಕ್ಕೆ ಗುರಿಯಾಗಿದ್ದು, ಅಧಿಕಾರದುರ್ಬಳಕೆಯ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಶಾಸಕ
ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ.ಸರ್ಕಾರಿ ಕಚೇರಿ ಕಟ್ಟಡವನ್ನು ಬಿಟ್ಟು ಶಾಸಕರು ಖಾಸಗಿ ಕಚೇರಿಯಲ್ಲಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ. ಇದು ಅಧಿಕಾರದ ದುರುಪಯೋಗ ಎಂದು ನಗರದ ಪತ್ರಕರ್ತರ ಭವನದಲ್ಲಿ
ಮಂಗಳವಾರ ನಗರಸಭೆ ಮಾಜಿ ಅಧ್ಯಕ್ಷ ಡಿ.ಎಸ್.ಆನಂದ್ ರೆಡ್ಡಿ ಆರೋಪಿಸಿದರು.
ಸರ್ಕಾರಿ ಆಡಳಿತ ಯಂತ್ರಾಂಗವನ್ನು ಸ್ವಂತ ಖಾಸಗಿ ಶಿಕ್ಷಣ ಸಂಸ್ಥೆಯಂತೆ ಎಂದು ಶಾಸಕರು ಭಾವಿಸಿದ್ದಾರೆ. ಆದ್ದರಿಂದಲೇ
ಸೋಮವಾರ ಅಧಿಕಾರಿಗಳನ್ನು ಬೆಂಗಳೂರಿಗೆ ಕರೆಸಿಕೊಂಡು ಸಭೆ ನಡೆಸಿ ಚರ್ಚಿಸಿದ್ದಾರೆ. ಇದು ಉತ್ತಮ ಆಡಳಿತದ ವೈಖರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಗರಸಭೆಯ ಬಗ್ಗೆ ಜನರಲ್ಲಿ ತಪ್ಪು ತಿಳಿವಳಿಕೆ ಮೂಡಿಸುವ ರೀತಿಯಲ್ಲಿ ಮಾತನಾಡುವ ಮೂಲಕ ಅಪಪ್ರಚಾರ ಕೈಗೊಳ್ಳುತ್ತಿರುವ ಶಾಸಕರು, ಭ್ರಷ್ಟಾಚಾರ ನಡೆದಿದ್ದಲ್ಲಿ ದಾಖಲೆ ಸಮೇತ ನಿರೂಪಿಸಲಿ. ಇದನ್ನು ಬಿಟ್ಟು ಎಲ್ಲರನ್ನೂ ಟೀಕಿಸುವುದು ಸರಿಯಲ್ಲ. ಸುಳ್ಳು ಆರೋಪಗಳನ್ನು ಬಿಡದಿದ್ದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಾಪಂ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಾಮಾಣಿಕ ಅಧಿಕಾರಿಗಳನ್ನು ವರ್ಗಾಯಿಸಲಾಗುತ್ತಿದೆ. ಕೆಲವೇ ತಿಂಗಳಲ್ಲಿ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಸೇರಿದಂತೆ ಹಲವರು ಎತ್ತಂಗಡಿಯಾಗಿದ್ದು ಇದೀಗ ಈ ಸರದಿಯಲ್ಲಿ ತಹಸೀಲ್ದಾರ್ ಸಹ ಇದ್ದಾರೆ. ಕಂದಾಯ ಇಲಾಖೆಯಲ್ಲಿ ಹೆಚ್ಚಿನ ಅರ್ಜಿಗಳ ಇತ್ಯರ್ಥ ಮತ್ತು ಜನರಿಗೆ ಸವಲತ್ತುಗಳನ್ನು ಒದಗಿಸುವ ಅಧಿಕಾರಿಗಳು ಏಕೆ ಶಾಸಕರಿಗೆ ಬೇಡ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಸುಬ್ರಮಣ್ಯ, ಮಾಜಿ ಸದಸ್ಯ ಮೊಬೈಲ್ ಬಾಬು, ಮುಖಂಡ ಸಂತೋಷ್ ರಾಜು ಇದ್ದರು.