ಗುರಿ ಸಾಧನೆಗೆ ತಾಯಿಯ ಮಾರ್ಗದರ್ಶನ ಅವಶ್ಯ

mkg1a
Published on

ಚನ್ನಗಿರಿ: ಮಕ್ಕಳು ಜೀವನದಲ್ಲಿ ಗುರಿ ತಲುಪಲು ತಾಯಿಯ ಪಾತ್ರ ಅತ್ಯಂತ ಮುಖ್ಯ. ಆಕೆ ಹಾಕಿಕೊಟ್ಟ ದಾರಿಯಲ್ಲಿ ನಡೆದವರು ಮುಂದೆ ದೊಡ್ಡ ಸಾಧನೆ ಮಾಡುವರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್. ಜಯಪ್ಪ ಅಭಿಪ್ರಾಯಪಟ್ಟರು.
ತಾಲೂಕಿನ ದಾಗಿನಕಟ್ಟೆ ಗ್ರಾಮದ ವಾಲ್ಮೀಕಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸುಧಾರಣೆ ಹಾಗೂ ತಾಯಂದಿರ ಸಭೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಂಗಳವಾರ ಮಾತನಾಡಿದರು.
ಮಕ್ಕಳು ಶಾಲೆಗೆ ಬಂದು ಅಕ್ಷರ ಕಲಿಯುವ ಮೊದಲೇ ತಾಯಿ ಪ್ರಥಮವಾಗಿ ಅಕ್ಷರ ಜ್ಞಾನ ಬಿತ್ತುತ್ತಾಳೆ. ಎಲ್ಲರಂತೆ ನಮ್ಮ ಮಗು ಸಮಾಜದ ಮುಖ್ಯವಾಹಿನಿಗೆ ಬರಬೇಕು, ಉನ್ನತ ಶಿಕ್ಷಣ ಪಡೆಯಬೇಕು ಎನ್ನುವ ಗುರಿ ಮನದಲ್ಲಿಟ್ಟುಕೊಂಡು ಗುರುವಾಗಿ ಗುರಿ ತಲುಪುವವರೆಗೆ ಜತೆಯಲ್ಲಿ ಇದ್ದು ಕಾಪಾಡುತ್ತಾಳೆ ಎಂದರು.
ಮೊಬೈಲ್ ಹಾಗೂ ಟಿವಿ ಇರುವುದು ಮನರಂಜನೆಗಾಗಿ. ಅದನ್ನು ವೈಯಕ್ತಿಕವಾಗಿ ಯಾರು ತೆಗೆದುಕೊಳ್ಳಬಾರದು. ಅಂತರ್ಜಾಲವನ್ನು ಜ್ಞಾನ ಪಡೆಯಲು ಮಾತ್ರ ಉಪಯೋಗಿಸಬೇಕು ಎಂದರು.
ಈ ಸಂದರ್ಭದಲ್ಲಿ ಪರೀಕ್ಷೆ ಪಾವಿತ್ರ್ಯ ಕುರಿತು ಪಾಲಕರು ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಕ್ಷೇತ್ರ ಸಮನ್ವಯಾಧಿಕಾರಿ ಡಾ.ಎಸ್. ಶಂಕರಪ್ಪ, ಎಲ್. ರಂಗಪ್ಪ, ಹನುಮಂತಪ್ಪ, ತಿಮ್ಮಪ್ಪ, ಮುಖ್ಯಶಿಕ್ಷಕ ನಜೀರ್‌ಸಾಬ್, ಡಿ.ಸಿ. ರಾಮಚಂದ್ರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net