ಕಾವೇರಿ ವಿವಾದ; ಮೈಸೂರಿನಲ್ಲಿ ಸೋಮವಾರದಿಂದ ನಿರಂತರ ಹೋರಾಟ

kaveri meeting
Published on

ಮೈಸೂರು: ಕಾವೇರಿ ನದಿ ನೀರು ಉಳಿಸಲು ಎಲ್ಲ ಸಂಘ ಸಂಸ್ಥೆಗಳು ಒಗ್ಗೂಡಿ ಸೋಮವಾರದಿಂದ ನಗರದಲ್ಲಿ ಹೋರಾಟ ಪ್ರಾರಂಭಿಸಲು ಶನಿವಾರ ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಹಮ್ಮಿಕೊಂಡಿದ್ದ ಕಾವೇರಿ ಕ್ರಿಯಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ನಗರದ ಕಾಡಾ ಕಚೇರಿ ಆವರಣ, ಕೆ.ಆರ್. ವೃತ್ತ, ಗಾಂಧಿ ಚೌಕ ಮುಂತಾದ ಕಡೆಗಳಲ್ಲಿ ಹೋರಾಟ ನಡೆಸುವ ಕುರಿತು ಚರ್ಚೆ ನಡೆ ಯಿತು. ಬಹುತೇಕರು ಸರ್ಕಾರದ ಗಮನ ಸೆಳೆಯಲು ಕೆ.ಆರ್. ವೃತ್ತದಲ್ಲಿ ಹೋರಾಟ ನಡೆಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಚಿನ್ನಾಭರಣವನ್ನು ಅಡವಿಟ್ಟು ಕೆಆರ್‌ಎಸ್ ಜಲಾಶಯ ನಿರ್ಮಾಣ ಮಾಡಿದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಗೆ ಮಾರ್ಲಾಪಣೆ ಮಾಡುವ ಮೂಲಕ ಹೋರಾಟ ಪ್ರಾರಂಭಿಸಲು ನಿರ್ಧರಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಮಾತನಾಡಿ, ನದಿ ನೀರು ಉಳಿಸಲು ನಾವು ನಡೆಸುವ ಹೋರಾಟ ಕಠಿಣವಾಗಿ ರಬೇಕು ಹಾಗೂ ಶಾಂತಿಯುತವಾಗಿರಬೇಕು. ಎಲ್ಲರು ಪಕ್ಷಬೇದ ಮರೆತು ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಕಾವೇರಿ ಕ್ರಿಯಾ ಸಮಿತಿ ಸದಸ್ಯ ಮೂಗೂರು ನಂಜುಂಡಸ್ವಾಮಿ ಮಾತನಾಡಿ, ಕಾವೇರಿ ನದಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಘೋರ ಅನ್ಯಾಯವಾಗಿದೆ. ಹೋರಾಟವನ್ನು ವಿವಿಧ ಸಂಘಟನೆಗಳು ವಿವಿಧ ಕಡೆಗಳಲ್ಲಿ ನಡೆಸದೆ ಒಟ್ಟಾಗಿ ಒಂದೆಡೆ ನಡೆಸೋಣ. ಈ ರೀತಿ ಹೋರಾಟ ನಡೆಸಿದರೆ ಹೋರಾಟಕ್ಕೆ ಬಲ ಬರುತ್ತದೆ ಎಂದು ಹೇಳಿದರು.

ಸಮಿತಿ ಸದಸ್ಯ ತುಳಸೀರಾಮ್ ಮಾತನಾಡಿ, ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯಕ್ಕೆ ತೀವ್ರ ಅನ್ಯಾಯವಾಗಿದೆ. ಕಾವೇರಿ ವಿಚಾರವನ್ನು ಅಂತಾರಾಜ್ಯ ನದಿ ನೀರು ಹಂಚಿಕೆಗಳ ವ್ಯಾಜ್ಯದ ವ್ಯಾಪ್ತಿಗೆ ತಂದರೆ ಮಾತ್ರ ನಮಗೆ ನ್ಯಾಯ ದೊರೆಯಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರಯತ್ನ ಆಗಬೇಕು. ಬ್ರಿಟಿಷರ ಕಾಲದಲ್ಲಿ ರೂಪಿಸಿದ ನಿಯಮಾವಳಿ ಪ್ರಕಾರವೇ ಇಂದಿಗೂ ನೀರು ಹಂಚಿಕೆಯಾಗುತ್ತಿದೆ. ಈ ವಿಚಾರದಲ್ಲಿ ವಾದ ಮಂಡಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ಸಮಿತಿ ಸದಸ್ಯರಾದ ಜಯಪ್ರಕಾಶ್, ಸುರೇಶ್ ಗೌಡ, ಹನುಮಂತೇಶ್, ಮುಖಂಡ ಮೆಲ್ಲಳ್ಳಿ ಮಹದೇವಸ್ವಾಮಿ, ಕೋದಂಡರಾಮು, ಸೋಸಲೆ ಸಿದ್ದರಾಜು, ಸಿದ್ದಲಿಂಗಪ್ಪ, ಮಂಜುನಾಥ್, ಮಲ್ಲಣ್ಣ, ನಿಂಗರಾಜು, ಇಂದಿರಾ, ಕಮಲಾ ಬಾಯಿ, ಗಿರಿಧರ್, ಬೋಗಾದಿ ಸಿದ್ದೇಗೌಡ, ಬಾಲಕೃಷ್ಣ ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net