

ಶಿವಮೊಗ್ಗ: ರಾಯಣ್ಣ-ಚನ್ನಮ್ಮ ಬ್ರಿಗೇಡ್ ಸ್ಥಾಪನೆಗೆ ಸಂಬಂಧಿಸಿದಂತೆ ಅ.20ರಂದು ಬಾಗಲಕೋಟೆಯಲ್ಲಿ ಮಹತ್ವದ ಸಭೆ ನಡೆಯಲಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ದಲಿತರು, ಹಿಂದುಳಿದವರು ಹಾಗೂ ರಾಷ್ಟ್ರಭಕ್ತರು ಒಂದೇ ವೇದಿಕೆಯಲ್ಲಿ ಬರಬೇಕು. ಅಂಥವರಿಗೆ ಒಂದು ವೇದಿಕೆ ಸಿದ್ಧವಾಗಬೇಕೆಂಬ ಕಾರಣಕ್ಕೆ ರಾಯಣ್ಣ-ಚನ್ನಮ್ಮ ಬ್ರಿಗೇಡ್ ಸ್ಥಾಪನೆಯ ಚಿಂತನೆ ಇದೆ. ಬಾಗಲಕೋಟೆಯಲ್ಲಿ ನಡೆಯುವ ಸಭೆಯಲ್ಲಿ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
ಬಾಗಲಕೋಟೆ ಸಭೆಯಲ್ಲಿ ನಾಡಿನ ವಿವಿಧೆಡೆಯಿಂದ ಪ್ರಮುಖರು ಭಾಗವಹಿಸಿ ಅನಿಸಿಕೆ ಹಂಚಕೊಳ್ಳಲಿದ್ದಾರೆ. ಅಲ್ಲಿ ವ್ಯಕ್ತವಾಗುವ ಸಲಹೆಗಳ ಮೇರೆಗೆ ಮುಂದಿನ ನಿರ್ಧಾರ ಪ್ರಕಟಿಸಲಾಗುವುದು ಎಂದರು.
ನಾನು ರಾಜ್ಯದ ಮುಖ್ಯಮಂತ್ರಿ ಆಗಬೇಕೆಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿರುವುದು ನನ್ನ ಮೇಲಿನ ಅಭಿಮಾನದಿಂದ. ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಇತ್ತೀಚೆಗೆ ಎರಡು ಕಾರ್ಯಕ್ರಮಗಳಲ್ಲಿ ನಾನು ಹಾಗೂ ಯತ್ನಾಳ್ ವೇದಿಕೆ ಹಂಚಿಕೊಂಡಿದ್ದೆವು. ಜಮಖಂಡಿ ತಾಲೂಕಿನಲ್ಲಿ ನಡೆದ ಸಭೆಯಲ್ಲಿ ಯತ್ನಾಳ್ ಮಾತನಾಡಿ ನಾನು ಸಿಎಂ ಆಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು ಎಂದು ಈಶ್ವರಪ್ಪ ವಿವರಿಸಿದರು.
ಜಮಖಂಡಿ ತಾಲೂಕಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನೇಕ ಮಠಾಧೀಶರೂ ಭಾಗವಹಿಸಿದ್ದರು. ಈ ವೇಳೆ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ನನ್ನ ಹಾಗೂ ಯತ್ನಾಳ್ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ ಎಂದು ತಿಳಿಸಿದರು.