ಅರ್ಥಪೂರ್ಣವಾಗಿ ನಡೆದ ವಿಶ್ವ ಯೋಗ ದಿನ

MDK05
Published on

ಮಡಿಕೇರಿ: ವಿಶ್ವ ಯೋಗ ದಿನದ ಅಂಗವಾಗಿ ಜಿಲ್ಲೆಯ ವಾಟೆಕಾಡು ಹೊದ್ದೂರು ಗ್ರಾಮ ಪಂಚಾಯಿತಿ ಕಟ್ಟಡದ ಸಭಾಂಗಣದಲ್ಲಿ ಒಂಬತ್ತನೇಯ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್, ಗ್ರಾಮ ಪಂಚಾಯಿತಿ ಹೊದ್ದೂರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಾಟೆಕಾಡು ಹೊದ್ದೂರು ಇವರ ಸಹಾಯೋಗದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.


ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ ಮಾತನಾಡಿ, ಯೋಗವು ಮನಸ್ಯನ ಆರೋಗ್ಯ ಮತ್ತು ಮನಸ್ಸನ್ನು ಹತೋಟಿಯಲ್ಲಿಡಲು ಉತ್ತಮ ಸಾಧನವಾಗಿದೆ. ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಯೋಗ ಅಭ್ಯಾಸ ಮಾಡಿದರೆ ಉತ್ತಮ ಜೀವನಶೈಲಿ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.


ಯೋಗ ತರಬೇತುದಾರರಾದ ಮತ್ತು ಅರ್ಜುನ ಪ್ರಶಸ್ತಿ ವಿಜೇತ ಪಿ.ಎಚ್.ಅಲೀಮಾ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿ ಯೋಗ ಕಲಿತರೆ ಮುಂದೆ ಎಲ್ಲರೂ ಉತ್ತಮ ಯೋಗ ಪಟುಗಳಾಗಿ ನಾಡಿಗೆ ಹೆಮ್ಮೆತರಬಹುದು. ಜತೆಗೆ ಯೋಗದಲ್ಲಿ ಹದಿನೆಂಟು ಸಾವಿರ ಆಸನಗಳಿದ್ದು, ಅದರಲ್ಲಿ ಸುಮಾರು ನೂರು ಆಸನಗಳನ್ನು ಕಲಿತಿರುವ ನನಗೆ ಅರ್ಜುನ ಪ್ರಶಸ್ತಿ ಲಭಿಸಿದೆ. ಹಾಗಾಗಿ ಮಕ್ಕಳು ಚಿಕ್ಕಂದಿನಿಂದಲೇ ಯೋಗಾಭ್ಯಾಸ ಮಾಡಿದರೆ ನನಗಿಂತ ಉತ್ತಮ ಸಾಧನೆ ಮಾಡಬಹುದು ಎಂದು ಮಕ್ಕಳನ್ನು ಹುರಿದುಂಬಿಸಿದರು.


ನಂತರ ಕೆಲವು ಸರಳ ಆಸನಗಲನ್ನು ಮಕ್ಕಳೊಂದಿಗೆ ಅಲೀಮಾರವರು ಯೋಗ ಮಾಡುವುದರ ಮೂಲಕ ವಿಶ್ವ ಯೋಗ ದಿನಕ್ಕೆ ಮೆರುಗು ಹೆಚ್ಚಿಸಿದರು. ಕಾರ್ಯಕ್ರಮದಲ್ಲಿ ಸ.ಹಿ.ಪ್ರಾ. ಶಾಲೆ ವಾಟೆಕಾಡು ಹೊದ್ದೂರಿನ ಶಿಕ್ಷಕ ಕುಮಾರ ಸ್ವಾಮಿ, ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಸಂಘಟಕಿ ಯು.ಸಿ.ದಮಯಂತಿ, ಜಿಲ್ಲಾ ಕಾರ್ಯದರ್ಶಿ ಎಂ.ಎಂ.ವಸಂತಿ, ಸಹ ಕಾರ್ಯದರ್ಶಿ ಬೊಳ್ಳಜಿರ.ಬಿ.ಅಯ್ಯಪ್ಪ, ಸ್ಥಳೀಯ ಸಂಸ್ಥೆ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯದರ್ಶಿ ಅಜ್ಜಮಕ್ಕಡ ವಿನುಕುಮಾರ್, ಗ್ರಾಮ ಪಂಚಾಯತಿ ಕಾರ್ಯದರ್ಶಿ ಚಂದ್ರಶೇಖರ, ಸದಸ್ಯರು ಅನಿತ ಅಪ್ಪಣ್ಣ ಗ್ರಾಮ ಪಂಚಾಯಿತಿ, ಶಾಲಾ ಶಿಕ್ಷಕರು, ಹಾಗೂ ಮಕ್ಕಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net