ಅಳ್ನಾವರದಲ್ಲಿ ಅರ್ಥಪೂರ್ಣ ಶಿಕ್ಷಕರ ದಿನಾಚರಣೆ

A meaningful Teacher's Day celebration in Alnavara
Published on

ಅಳ್ನಾವರ: ಪಟ್ಟಣದ ಸೇಂಟ್ ತೆರೇಸಾ ಪ್ರೌಢಶಾಲೆಯಲ್ಲಿ ಗುರುವಾರ ಶಿಕ್ಷಕರ ದಿನವನ್ನು ವಿಶಿಷ್ಟವಾಗಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳು ಗುರುಗಳಿಗೆ ಸಾಂಪ್ರದಾಯಿಕ ಪದ್ಧತಿಯಂತೆ ಆರತಿ ಮಾಡಿ ಆಶೀರ್ವಾದ ಪಡೆದರು.

ಅಕ್ಷರ ಧಾರೆ ಎರೆದು, ಕತ್ತಲಿಂದ ಬೆಳಕಿನಡೆ ನಮ್ಮನ್ನು ಕೈ ಹಿಡಿದು ನಡೆಸುವ ಗುರುಗಳಿಗೆ ವಂದನೆ ಎಂಬ ಹಾಡು ಈ ಎಲ್ಲ ಕಾರ್ಯಕ್ಕೆ ಇಂಬು ನೀಡುವಂತಿತ್ತು. ಗುರುಗಳಿಗೆ ನೆನಪಿನ ಕಾಣಿಕೆ ಅರ್ಪಿಸಲಾಯಿತು.

ಶಿಕ್ಷಕರಿಗಾಗಿ ಮ್ಯೂಜಿಕಲ್ ಚೇರ್ ಸೇರಿದಂತೆ ವಿವಿಧ ಮನರಂಜನೆ ಆಟೋಟ ಹಮ್ಮಿಕೊಳ್ಳಲಾಗಿತ್ತು. ವಿಜೇತ ಶಿಕ್ಷಕರಾದ ಮಂಜುನಾಥ ಪಾಟೀಲ, ರಾಜು ಅಷ್ಟೇಕರ, ಮಂಜುನಾಥ ಬೆಂಡಿಗೇರಿ, ಸುಷ್ಮಾ ಬೆರೆಟ್ಟೊ, ಪಲ್ಲವಿ ಶಿಂಗರಗಾವಂಕರ, ನ್ಯಾನಸಿ ಫರ್ನಾಂಡೀಸ್ ಅವರಿಗೆ ಬಹುಮಾನ ನೀಡಲಾಯಿತು. ಶಿಕ್ಷಕರ ಹಾವಭಾವ ಅನುಕರಣೆ ಮಾಡಿ, ಪಾಠ ಮಾಡುವ ಚಿಕ್ಕ ನಾಟಕ ಪ್ರದರ್ಶನ ಹಾಸ್ಯದ ಹೊನಲು ಹರಿಸಿತು.

ನೆರೆದಿದ್ದ ಶಿಷ್ಯರನ್ನು ಉದ್ದೇಶಿಸಿ ಸೇಂಟ್ ತೆರೇಸಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್. ಲೂಕಾಸ್ ಮಾತನಾಡಿ, ಶಿಕ್ಷಕ ವೃತ್ತಿ ಶ್ರೇಷ್ಠವಾದದ್ದು. ಗುರು ತಿಳಿಸಿದ ಜ್ಞಾನ, ಧೈರ್ಯ, ಏಕಾಗ್ರತೆ ಮಾರ್ಗ, ಉತ್ತಮ ಕಲಿಕೆ ವಿದ್ಯಾರ್ಥಿಗಳ ಸಾಧನೆಗೆ ಪ್ರೇರಕ ಶಕ್ತಿ. ಗುರುವಿನ ಆಶೀರ್ವಾದ ಬಲದಿಂದ ಜೀವನದ ಗುರಿ ತಲುಪಲು ಸಾಧ್ಯ. ಬಾವಿ ಶಿಕ್ಷಕರಾಗುವ ವಿದ್ಯಾರ್ಥಿಗಳು ಮಕ್ಕಳಲ್ಲಿ ಮಾನವೀಯ ಮೌಲ್ಯ, ಭಯ, ಭಕ್ತಿ, ಪ್ರಾಮಾಣಿಕತೆಯ ಬೀಜ ಬಿತ್ತಬೇಕು ಎಂದರು.

ಸೇಂಟ್ ತೆರೇಸಾ ಕನ್ನಡ, ಆಂಗ್ಲ ಮಾಧ್ಯಮ ಹಾಗೂ ಪಿಯು ಕಾಲೇಜ್ ಸಹಯೋಗದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕ ಫಾ. ಮರಿಯಾದಾಸ ವಹಿಸಿದ್ದರು. ಶಿವಾನಂದ ಹಡಪದ, ಬಿ.ಎಲ್. ದಾರ್ಲಾ, ವಿನಾಯಕ ಪಾಟೀಲ, ಎಂ.ಬಿ. ಮಾಳಣ್ಣವರ, ಕಿರಣ ಡಿಸೋಜಾ, ವಿಜಯಲಕ್ಷ್ಮೀ ಅಷ್ಟೇಕರ ಇದ್ದರು. ಸತೀಶ ಖೋದಾನಪೂರ ಸ್ವಾಗತಿಸಿದರು. ಸುಕನ್ಯಾ ಮಿರಾಶಿ, ವೈಷ್ಣವಿ ಹವಳಿರಪ್ಪನವರ ನಿರೂಪಿಸಿದರು. ರಾಕೇಶ ಶಿಂಧೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net