ಅಂತರಂಗ ಶುದ್ಧಿ ತರಲಿದೆ ಸಾರ್ಥಕ ಜೀವನ

MLK KAYAKA 18 (2)
Published on

ಮೊಳಕಾಲ್ಮೂರು: ಬಟ್ಟೆ, ದೇಹದಲ್ಲಿನ ಕೊಳೆ ತೊಳೆಯುವ ರೀತಿ ಅಂತರಂಗ ಶುದ್ಧಿ ಮಾಡಿಕೊಂಡಾಗ ಮಾನವ ಕುಲಕ್ಕೆ ಸಾರ್ಥಕ ಜೀವನ ಲಭಿಸಲಿದೆ ಎಂದು ಮಡಿವಾಳ ಮಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ ಹೇಳಿದರು.

ಶ್ರಾವಣ ಮಾಸ ಹಿನ್ನೆಲೆಯಲ್ಲಿ ಚಿತ್ರದುರ್ಗ ಮಡಿವಾಳ ಗುರುಪೀಠ ಪಟ್ಟಣದ ಗುರುಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮನ-ಮನೆಗೆ ಮಾಚಿದೇವ ಜನೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

12ನೇ ಶತಮಾನದಲ್ಲಿ ಮಾಚಿದೇವ ಪ್ರಭು ಜಗತ್ತಿಗೆ ಸನ್ಮಾರ್ಗದ ನಡೆ ಕುರಿತು ಸ್ಪಷ್ಟ ಸಂದೇಶ ನೀಡಿದ್ದಾರೆ. ಅವರ ಆದರ್ಶ, ಆಶಯ ಅಳವಡಿಸಿಕೊಂಡರೆ ನೆಮ್ಮದಿ ದೊರೆಯಲಿದೆ ಎಂದರು.

ಅಂದಿನ ಕಾಲಘಟ್ಟದ ಅನುಭವಮಂಟಪದ ಮೂಲಕ ಸರ್ವಧರ್ಮಿಯರಿಗೂ ಸಾಮಾಜಿಕ ನ್ಯಾಯ ಕೊಡಿಸುವ ಶರಣ ಪರಂಪರೆಯಲ್ಲಿ ಪರಿಶುದ್ಧ ಸದ್ಭಾವನಾ ಕೇಂದ್ರವಾಗಿತ್ತು. ಉದಾತ್ತ ಚಿಂತನೆಯಲ್ಲಿ ಸಾಂಸ್ಕೃತಿಕ ನಾಯಕರಂತೆ ಸಮಾಜ ಸುಧಾರಣೆಗೆ ಅಪಾರ ಕಾಳಜಿ ಹೊಂದಿದ್ದ ಮಾಚಿದೇವ ಪ್ರಭುಗಳ ನಡೆ ಅತ್ಯಂತ ಅರ್ಥಪೂರ್ಣವಾಗಿತ್ತು ಎಂದು ಹೇಳಿದರು.

ವರ್ಷದಲ್ಲಿ ಬರುವ ಶ್ರಾವಣಮಾಸ ಮಾನವ ಕುಲದ ಸದ್ಗತಿಗೆ ಅತ್ಯಂತ ಶ್ರೇಷ್ಠತೆ ಪಡೆದುಕೊಂಡಿದೆ. ಎಲೆಮರೆ ಕಾಯಿಂತಿರುವ ಮಡಿವಾಳ ಸಮಾಜವನ್ನು ಅಭಿವೃದ್ಧಿ ದಿಕ್ಕಿನಲ್ಲಿ ಕೊಂಡೊಯ್ಯಲು ಇಂತಹ ಮಹತ್ವಪೂರ್ಣ ಕಾಯಕ ಸೇವೆಗೆ ಒತ್ತುಕೊಡಲಾಗಿದೆ ಎಂದರು.

ಹೊಟ್ಟೆ ತುಂಬಿಸುತ್ತಿಲ್ಲ ಬಟ್ಟೆ ಶುಚಿ ಕೆಲಸ: ಬಟ್ಟೆ ಶುಚಿಗೊಳಿಸುವ, ಇಸ್ತ್ರಿ ಮಾಡುವ ಕಾಯಕದಿಂದ ಮಡಿವಾಳ ಸಮಾಜದ ಜನರ ಹೊಟ್ಟೆ ತುಂಬುತ್ತಿಲ್ಲ. ಇದರ ಪರಿಣಾಮ ಮಕ್ಕಳ ಶಿಕ್ಷಣ, ಆರೋಗ್ಯಕ್ಕೆ ಆದ್ಯತೆ ನೀಡಲು ಆಗುತ್ತಿಲ್ಲ ಎಂದು ಹೇಳಿದರು.

ಈ ಕಾರಣಕ್ಕೆ ಸಮುದಾಯ ಆಧುನೀಕ ಪ್ರಪಂಚಕ್ಕೆ ತೆರೆದುಕೊಳ್ಳಬೇಕು. ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಉನ್ನತ ಹುದ್ದೆ ಪಡೆಯಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಸಮಾಜವನ್ನು ಎಚ್ಚರಿಸುವ ಕೆಲಸ ಬುದ್ಧಿಜೀವಿಗಳು ಮಾಡಬೇಕು ಎಂದರು.

ರಂಗಕರ್ಮಿ ಡಾ.ವಿ.ಬಸವರಾಜ್ ಮಾತನಾಡಿ, ಮಡಿವಾಳ ಮಾಚಿದೇವ ಪ್ರಭುಗಳು ಸಣ್ಣ ಸಮಾಜದಲ್ಲಿ ಹುಟ್ಟಿದರೂ ಚಿಕ್ಕವಯಸ್ಸಿನಲ್ಲೇ ಸಾತ್ವಿಕ ಗುಣಗಳ ಶರಣ ಪರಂಪರೆಯಲ್ಲಿ ನಿಸ್ವಾರ್ಥ ಕಾಯಕ ಸೇವೆಯಲ್ಲಿ ವಿಶ್ವಗುರು ಬಸವಣ್ಣನಿಗೆ ಪ್ರೇರಣೆಯಾಗಿದ್ದರು. ಅಂತಹ ಮಹಾನ್ ಶರಣರ ಸ್ಮರಣೆಯಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದು ಹೇಳಿದರು.

ಆಳುವ ಸರ್ಕಾರಗಳು ಮಡಿವಾಳ ಸಮಾಜವನ್ನು ಕಡೆಗಣಿಸುತ್ತ ಬಂದಿದ್ದು, ಪ್ರಸ್ತುತ ಕಾಲಘಟ್ಟದಲ್ಲಿ ಮಾಯವಾಗುತ್ತಿರುವ ಕುಲಕಸುಬಿನಿಂದ ಹೊಟ್ಟೆ ತುಂಬುತ್ತಿಲ್ಲ. ಆರ್ಥಿಕವಾಗಿ ಪ್ರಬಲರಾಗಲು ಸಾಧ್ಯವಾಗುತ್ತಿಲ್ಲ. ಶಿಕ್ಷಣ, ಸಾಮಾಜಿಕ ನ್ಯಾಯ ಪಡೆಯಲು ಸಾಂಘಿಕ ಶಕ್ತಿಯ ಜನಾಂದೋಲನಕ್ಕೆ ಗಮನ ನೀಡಬೇಕಿದೆ ಎಂದರು.

ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ರಾಮಜ್ಜ ಮಾತನಾಡಿ, ಮಡಿವಾಳ ಸಮಾಜ ಅತ್ಯಂತ ಹಿಂದುಳಿದಿದೆ. ಈ ಸಮುದಾಯಕ್ಕೆ ಎಸ್ಸಿ ಮೀಸಲು ಕಲ್ಪಿಸಲು ರಾಜ್ಯ-ಕೇಂದ್ರ ಸರ್ಕಾರ ಮುಂದಾಗಬೇಕು. ಈಗಾಗಲೇ ಶ್ರೀಗಳು ಹೋರಾಟದ ಮೂಲಕ ಸರ್ಕಾರದ ಮೇಲೆ ಒತ್ತಡ ತಂದಿದ್ದು, ನ್ಯಾಯಯುತ ಬೇಡಿಕೆ ಈಡೇರಿಕೆಗೆ ಸರ್ಕಾರ ಮುಂದಾಗಬೇಕು ಎಂದರು.

ಉಪಾಧ್ಯಕ್ಷ ವಿರೂಪಾಕ್ಷಪ್ಪ, ತಾಲೂಧ್ಯಕ್ಷ ನಾಗರಾಜ, ಪದಾಧಿಕಾರಿಗಳಾದ ದೊಡ್ಡಲಿಂಗಪ್ಪ, ಗುರುಮೂರ್ತಿ, ಹನುಮಂತಪ್ಪ, ಗಂಗಾರಡ್ಡಿ, ಸರೋಜಮ್ಮ, ನೇಮಕಲ್ಲಪ್ಪ, ಅಂಜಿನಪ್ಪ, ಮಂಜಣ್ಣ, ಕೃಷ್ಣಮೂರ್ತಿ, ಶಿಕುಮಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net