

ಮಡಿಕೇರಿ: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಭೋದಕ ಆಸ್ಪತ್ರೆ ಮಡಿಕೇರಿ ಮತ್ತು ಗ್ರಾಮ ಪಂಚಾಯಿತಿ ಇವರ ಸಂಯುಕ್ತ ಆಶ್ರಯದಲ್ಲಿ ಭಾಗಮಂಡಲದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಮಟ್ಟದ ಆಯುಷ್ಮಾನ್ ಭವ ಕಾರ್ಯಕ್ರಮದ ಬೃಹತ್ ಆರೋಗ್ಯ ತಪಾಸಣ ಶಿಬಿರ ನಡೆಯಿತು.
ಶಿಬಿರದಲ್ಲಿ ನೇತ್ರ, ಪ್ರಸೂತಿ ಮತ್ತು ಸ್ತ್ರೀ ರೋಗ, ಮಕ್ಕಳ, ಚರ್ಮ ರೋಗ, ಕಿವಿ ಮೂಗು ಗಂಟಲು, ಮೂಳೆ ಮತ್ತು ಕೀಲು, ಸಮುದಾಯ ವೈದ್ಯಕೀಯ, ಮಾನಸಿಕ ರೋಗ, ಅಸಾಂಕ್ರಮಿಕ ರೋಗಗಳ ನುರಿತ ತಜ್ಞ ವೈದ್ಯರಿಂದ ವೈದ್ಯಕೀಯ ಸೇವೆಯನ್ನು ನೀಡಲಾಯಿತು. ಶಿಬಿರದಲ್ಲಿ ಸುಮಾರು ೧೨೦ಕ್ಕೂ ಹೆಚ್ಚಿನ ಹೊರ ರೋಗಿಗಳು ವೈದ್ಯರ ಭೇಟಿ ಮಾಡಿದರೆ, ೪೦ ಕ್ಕಿಂತ ಹೆಚ್ಚಿನ ಜನರು ಅಸಾಂಕ್ರಮಿಕ ರೋಗಗಳ ಪರೀಕ್ಷೆಯನ್ನು ಮಾಡಿಸಿಕೊಂಡರು. ಹೆಚ್ಚಿನ ಚಿಕಿತ್ಸೆಗಾಗಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಭೋದಕ ಆಸ್ಪತ್ರೆ ಮಡಿಕೇರಿಗೆ ೨೫ ರೋಗಿಗಳನ್ನು ಕಳುಹಿಸಿ ಕೊಡಲಾಯಿತು.
ಶಿಬಿರವನ್ನು ಭಾಗಮಂಡಲ ಪಂಚಾಯಿತಿ ಅಧ್ಯಕ್ಷ ಕಾಳನ ರವಿ ಉದ್ಘಾಟಿಸಿದರು. ಶಿಬಿರದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವತಿಯಿಂದ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಉಚಿತ ಆಯುಷ್ಮಾನ್ ಕಾರ್ಡುಗಳ ನೋಂದಣಿ, ಉಚಿತ ಯು.ಡಿ.ಐ.ಡಿ ಕಾರ್ಡಗಳ ನೋದಣಿ, ದೇಹದಾನ, ನೇತ್ರದಾನ, ಅಂಗಾಂಗ ದಾನ ಕುರಿತು, ಹಾಗೂ ಇನ್ನಿತರ ಯೋಜನೆಗಳ ಬಗ್ಗೆ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ನಂಜುಂಡಯ್ಯ ಮಾಹಿತಿ ನೀಡಿದರು.
ಶಿಬಿರದಲ್ಲಿ ಸಾಮಾನ್ಯ ವೈದ್ಯ ಶಾಸ್ತ್ರ ಮುಖ್ಯಸ್ಥ ಡಾ.ಲೋಕೇಶ್, ನೋಡಲ್ ಅಧಿಕಾರಿ ಡಾ.ರಾಮಚಂದ್ರ ಕಾಮತ್, ಮಕ್ಕಳ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಕುಶ್ವಂತ್, ತಜ್ಞ ವೈಧ್ಯರಾದ ಡಾ.ಶ್ರೀದೇವಿ, ಡಾ.ಸತ್ಯಕಿ, ಡಾ.ರಾಕೇಶ್, ಡಾ.ಹೇಮಾವತಿ, ಡಾ.ನಿರಂಜನ್, ಡಾ.ಚಿತ್ರ, ವೈದ್ಯಕೀಯ ಕಾಲೇಜಿನ ವೈದ್ಯರು, ವೈದ್ಯಕೀಯ ವಿಧ್ಯಾರ್ಥಿಗಳು, ಅರೆ ವೈದ್ಯಕೀಯ ಸಿಬ್ಬಂದಿಗಳು, ಆಸ್ಪತ್ರೆಯ ಸಿಬ್ಬಂದಿ, ಸಮುದಾಯ ಆರೋಗ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರಿದ್ದರು.