ರೈತರ ಉಳಿವಿಗಾಗಿ ಬೃಹತ್ ಸಮಾವೇಶ

raitha c and d
Published on

ಮಡಿಕೇರಿ: ನಮ್ಮ ಭೂಮಿ ನಮ್ಮ ಹಕ್ಕು ರೈತ ಹೋರಾಟ ಸಮಿತಿ ಹಾಗೂ ರೈತ ಸಂಘ ವತಿಯಿಂದ ರೈತರ ಉಳಿವಿಗಾಗಿ ಮಡಿಕೇರಿ ನಗರದಲ್ಲಿ ರೈತರ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲಾಯಿತು.

ಸಾವಿರಾರು ಸಂಖ್ಯೆಯಲ್ಲಿ ಜಮಾಹಿಸಿದ್ದ ರೈತರು ನಗರದ ಸುದರ್ಶನ್ ವೃತ್ತದಿಂದ ಜನರಲ್ ತಿಮ್ಮಯ್ಯ ವೃತ್ತ, ಮಂಗೇರಿರ ಮುತ್ತಣ್ಣ ವೃತ್ತದ ಮಾರ್ಗವಾಗಿ ನಗರಠಾಣೆ, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತದವರೆಗೆ ಮೆರವಣಿಗೆ ಸಾಗಿ ಗಾಂಧಿಮೈದಾನದಲ್ಲಿ ಸಮಾವೇಶಗೊಂಡಿತು.

ಈ ಸಂದರ್ಭ ಖ್ಯಾತ ನ್ಯಾಯವಾದಿ ಮತ್ತು ಸಾಮಾಜಿಕ ಹೋರಾಟಗಾರ ಸುಧೀರ್ ಕುಮಾರ್ ಮುರೊಳ್ಳಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ಸಿಎನ್‌ಡಿ ಸಮಸ್ಯೆ ಕೇವಲ ಕೊಡಗಿನ ಸಮಸ್ಯೆ ಅಲ್ಲ. ರಾಜ್ಯದ ಸಮಸ್ಯೆ ಎಂದು ಪರಿಗಣಿಸಬೇಕಿದೆ. ಕೊಡಗಿನ ಸಮಸ್ಯೆಯಲ್ಲ ಎಲ್ಲರ ಸಮಸ್ಯೆ ಎಂಬ ಧ್ವನಿಯನ್ನು ಎತ್ತಬೇಕು. ಅರಣ್ಯ ಕಾಯ್ದೆ ಸೆಕ್ಷನ್ ೪ ಘೋಷಣೆ ಮಾಡಿರುವ ಆದೇಶವನ್ನು ಸರ್ಕಾರ ಹಿಂಪಡೆಯಬೇಕು ಎಂದ ಅವರು, ನಾವು ಒತ್ತುವರಿದಾರಿಗಳಲ್ಲ. ನಾವು ಕೃಷಿ ಮಾಡುತ್ತಿರುವ ಜಾಗಕ್ಕೆ ಅರಣ್ಯ ಇಲಾಖೆ, ಕಂದಾಯ ಇಲಾಖೆ ಬರುತ್ತಿದೆ. ದೇವರ ಕಾಡನ್ನು ಉಳಿಸಿದ್ದು ರೈತರೇ ಹೊರತು ಎನ್.ಜಿ.ಒಗಳಲ್ಲ. ಬಹುತಿಕ ಸರ್ವೆ ಮಾಡಿದ್ದರೆ ಈ ಗೊಂದಲ ಬರುತ್ತಿರಲಿಲ್ಲ ಎಂದ ಅವರು, ಇದಕ್ಕೆ ಕಾರಣರಾದ ದುಷ್ಟ ಅಧಿಕಾರಿಗಳ ವಿರುದ್ಧ ದ್ವನಿ ಎತ್ತಬೇಕು ಎಂದರು.

ಸಿ ಆ್ಯಂಡ್ ಡಿ, ಸೆಕ್ಷನ್ ೪ ಕೇವಲ ಕೊಡಗಿನ ಶಾಸಕರ ಸಮಸ್ಯೆಯಲ್ಲ. ರಾಜ್ಯದ ಎಲ್ಲಾ ಶಾಸಕ ಸಮಸ್ಯೆಯಾಗಿದೆ. ಶಾಸಕರು, ರೈತರು ಮಾತನಾಡಬೇಕು. ಆಗ ಮಾತ್ರ ಹೋರಾಟಕ್ಕೆ ಅರ್ಥ ಬರುತ್ತದೆ ಎಂದ ಅವರು, ಇಂದು ಜನ ಸ್ಪಷ್ಟವಾಗಿದ್ದಾರೆ. ಆದರೆ, ಅಧಿಕಾರಿಗಳು ಸ್ಪಷ್ಟವಾಗಿಲ್ಲ. ಅರಣ್ಯದ ರಕ್ಷಣೆಯ ಹೊಣೆ ಎಲ್ಲರದ್ದಾಗಬೇಕು. ಇಲ್ಲದಿದ್ದರೆ, ನಿಮ್ಮ ಭೂಮಿಯೊಂದಿಗೆ ದೇವಸ್ಥಾನ, ಶಾಲೆ, ಅಂಗನವಾಡಿ, ರಸ್ತೆಗಳು ಕಾಣೆಯಾಗಲಿದೆ ಎಂದು ಅವರು, ಕೊಡಗು ಮತ್ತು ಮಲೆನಾಡು ಭಾಗವನ್ನು ವಿಶೇಷ ಕೃಷಿವಲಯ ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು.

ಮಂತರಗೌಡ ಅವರು ಎಲ್ಲಾ ಶಾಸಕರನ್ನೂ ಒಟ್ಟು ಮಾಡಬೇಕು. ಮಲೆನಾಡು ಕರಾವಳಿ ಭಾಗದ ೩೬ ಕ್ಷೇತ್ರದ ಸಮಸ್ಯೆ ಕುರಿತು ಮಾತನಾಡಬೇಕು. ಅರಣ್ಯ ಸೆಟಲ್‌ಮೆಂಟ್ ಅಧಿಕಾರಿಯ ಮುಂದೆ ಆಕ್ಷೇಪ ಹಾಕಬೇಕು ಎಂದ ಅವರು, ಜನಪ್ರತಿನಿದಿಗಳು ರಾಜಕೀಯ ಪ್ರತಿನಿಧಿಗಳಾಗದೇ ಜನಪರ ನಾಯಕರಾಗಬೇಕು. ನಮ್ಮ ಜಾಗವನ್ನು ನಾವೇ ರಕ್ಷಣೆ ಮಾಡದಿದ್ದರೆ ನಮ್ಮ ಮನೆಗಳಿಗೆ ನಾವೇ ಬೀಗ ಹಾಕಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದರು.

ಸಮಿತಿಯ ಕಾನೂನು ಸಲಹೆಗಾರರು ಮತ್ತು ಸಂಚಾಲಕ ಬಿ.ಜೆ.ದೀಪಕ್ ಮಾತನಾಡಿ, ಉಳುಮೆಗೆ ಯೋಗ್ಯವಲ್ಲದ ಜಾಗವನ್ನು ಸಿ ಆ್ಯಂಡ್ ಡಿ ಭೂಮಿ ಎಂದು ಹೇಳಲಾಗುತ್ತದೆ. ದಟ್ಟ ಅರಣ್ಯ, ಪೈಸಾರಿ ಜಾಗವನ್ನು ಗುರುತು ಮಾಡಿಲ್ಲ. ಅವೈಜ್ಞಾನಿಕವಾಗಿ ಸರ್ವೆ ಮಾಡಿ ಉಳುಮೆ ಭೂಮಿಯನ್ನು ಸೇರಿಸಿ ಸಿ ಆ್ಯಂಡ್ ಡಿ ಎಂದು ಹೇಳಲಾಗುತ್ತಿದೆ. ಇಂದು ನಮ್ಮ ಉಳಿವಿಗಾಗಿ ಹೋರಾಟ ಅಗತ್ಯವಾಗಿದೆ. ಅಲ್ಲದೇ, ಸಿಎನ್‌ಡಿ ರೈತರಿಗೆ ಮಾರಾಕವಾಗಿದೆ. ಆದ್ದರಿಂದ ಪಕ್ಷತೀತವಾಗಿ ಹೋರಾಟ ಮಾಡಲಾಗುತ್ತಿದೆ ಎಂದರು.

ನಮ್ಮ ಭೂಮಿ ನಮ್ಮ ಹಕ್ಕು ರೈತ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ಚಕ್ರವರ್ತಿ ಮಾತನಾಡಿ, ಈಗಾಗಲೇ ಹಾರಂಗಿ ಅಣೆಕಟ್ಟು ಮುಳುಗಡೆಯಿಂದ ೩೭೦೦ ಎಕರೆ, ಹೇಮಾವತಿ ಅಣೆಕಟ್ಟೆಯಿಂದ ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ೧೧ಸಾವಿರ ಎಕರೆ ಭೂಮಿಯನ್ನು ಕಳೆದುಕೊಂಡಿದ್ದೇವೆ. ಈಗ ಕೃಷಿ ಮಾಡಿಕೊಂಡಿರುವ ೨೫ ಸಾವಿರ ಎಕರೆ ಭೂಮಿಯನ್ನು ಸಿ ಆ್ಯಂಡ್ ಡಿ ನೆಪದಲ್ಲಿ ಅರಣ್ಯ ಇಲಾಖೆಗೆ ನೀಡಲು ತಯಾರಿ ನಡೆಯುತ್ತಿದೆ. ಇದನ್ನು ರದ್ದುಗೊಳಿಸಿ ಸಂಬಂಧ ಪಟ್ಟವರು ವರದಿಯನ್ನು ಪರಿಶೀಲಿಸಬೇಕು. ಜತೆಗೆ ಸರ್ಕಾರ ಮಧ್ಯ ಪ್ರವೇಶಿಸಿ ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿ ಸರ್ವೆಗೆ ಅದೇಶ ನೀಡಬೇಕು ಎಂದು ಆಗ್ರಹಿಸಿದರು.

ಸಮಿತಿ ಸಂಚಾಲಕರಾದ ಕೆ.ಎಂ.ಲೋಕೇಶ್ ಮಾತನಾಡಿ, ಆಡಳಿತ ಪಕ್ಷ, ವಿರೋಧ ಪಕ್ಷದ ಜನಪ್ರತಿನಿಧಿಗಳು ಸೇರಿ ರೈತರ ಸಮಸ್ಯೆಯನ್ನು ಪರಿಹರಿಸುವಂತಾಗಬೇಕು. ಅರಣ್ಯ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಮಾಡಿದ ತಪ್ಪಿನಿಂದ ಇಂದು ರೈತರು ಪರಿತಪಿಸುವಂತಾಗಿದೆ. ಈ ಸಂಬಂಧ ಅಧಿವೇಶನದಲ್ಲಿ ಶಾಸಕರಿಗೆ ಮಾತನಾಡಲು ಅವಕಾಶ ನೀಡುವುದಿಲ್ಲ. ನಮ್ಮ ಪರಿಸ್ಥಿತಿಯನ್ನು ಆಲಿಸಲು ಸಮಯವಿಲ್ಲ. ಆದರೆ, ಕೊಡಗಿನ ಕಾವೇರಿ ನೀರು ಮಾತ್ರ ಬೇಕಾಗಿದೆ ಎಂದು ಕಿಡಿಕಾರಿದರು.

ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಪೈಸಾರಿ ಜಾಗವನ್ನು ಅಂದು ಅರಣ್ಯಕ್ಕೆ ನಡುತೋಪು ಬೆಳೆಸಲು ಕೊಡುವ ವ್ಯವಸ್ಥೆಯಿತ್ತು. ಜತೆಗೆ ಸಿ ಆ್ಯಂಡ್ ಡಿ ಲ್ಯಾಂಡ್‌ಗೆ ಹಕ್ಕುಪತ್ರ ನೀಡಬಹುದು ಎಂಬುದಿದೆ. ಆದರೆ, ಪರಿಸರ ವಾದಿಗಳು ಎಂದುಕೊಳ್ಳುವವರು ನೈಜ್ಯ ಪರಿಸರ ವಾದಿಗಳಲ್ಲ. ಅವರು ಪರಿಸರ ವ್ಯಾದಿಗಳು. ರೈತರಿಗೆ ಪರಿಸರ ವ್ಯಾದಿಗಳು ಕಿರುಕುಳ ನೀಡುವುದರ ಜತೆಗೆ ಫಾರಿನ್ ಫಂಡ್ ಅನ್ನು ದೋಚುತ್ತಿದ್ದಾರೆ. ಸಿ ಆ್ಯಂಡ್ ಡಿ ಲ್ಯಾಂಡ್ ಪಡೆದುಕೊಳ್ಳಲು ಅರಣ್ಯ ಇಲಾಖೆಯವರು ಬಂದರೆ ಅವರನ್ನು ಓಡಿಸುವ ಕೆಲಸ ಮಾಡಬೇಕು ಎಂದರು.

ಪ್ರತಿಭಟನಾ ಸಮಾವೇಶದಲ್ಲಿ ಕಿಸಾನ್ ಮೋರ್ಚದ ರಾಜ್ಯಧ್ಯಾಕ್ಷ ಜಯರಾಮ್, ಎಂಎಲ್‌ಸಿ ಸುಜಾಕುಶಾಲಪ್ಪ, ಮಾಜಿ ಎಂಎಲ್‌ಸಿಗಳಾದ, ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಎಚ್.ಸಿ.ಮೇದಪ್ಪ, ರೈತ ಸಂಘದ ಅಧ್ಯಕ್ಷ ಮನು ಸೋಮಯ್ಯ, ಪ್ರಮುಖರಾದ ಚಂದ್ರಕಲಾ, ನಾಪಂಡ ಮುತ್ತಪ್ಪ, ಹರಪಳ್ಳಿ ರವೀಂದ್ರ, ಅಮೃತೇಶ್, ನಮ್ಮ ಭೂಮಿ ನಮ್ಮ ಹಕ್ಕು ರೈತ ಹೋರಾಟ ಸಮಿತಿ ಸಂಚಾಲಕರಾದ ಭರತ್, ಶುಂಠಿ, ದಿನೇಶ್.ಕೆ.ಎಂ, ದಿವಾಕರ್ ಹಾಗೂ ಕೊಡಗು ಜಿಲ್ಲೆಯ ರೈತರು ಸೇರಿದಂತೆ ಸಕಲೇಶಪುರದಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ರೈತರ ಜತೆ ನಿಲ್ಲುತ್ತೇನೆ: ಮಂತರ್‌ಗೌಡ

ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್‌ಗೌಡ ಮಾತನಾಡಿ, ರಾಜಕೀಯ ಲಾಭ ಪಡೆಯುದಕ್ಕಿಂತ ರೈತರ ಪರ ನಿಲ್ಲಬೇಕೆಂಬ ಆಸೆಯಿದೆ. ಅದರಂತೆ ಮನಸ್ಪೋರ್ವಕವಾಗಿ ಹೋರಾಟಕ್ಕೆ ರೈತರ ಜತೆ ನಿಲ್ಲುತ್ತೇನೆ ಎಂದರು.

ಮುಖ್ಯಮಂತ್ರಿಗಳು, ಅರಣ್ಯ ಸಚಿವರು, ಕಂದಾಯ ಸಚಿವರ ನೇತೃತ್ವದಲ್ಲಿ ತಾನು ಸೇರಿದಂತೆ ಶಿವಮೊಗ್ಗ, ಹಾಸನ ಇತರೆ ಜಿಲ್ಲೆಗಳ ೩೬ ಶಾಸಕರೊಂದಿಗೆ ಅತೀ ಶ್ರೀಘ್ರದಲ್ಲಿ ಜಂಠಿ ಸಭೆ ನಡೆಸಲಾಗುವುದು ಎಂದರು.

ರೈತರ ಹಾದಿಯನ್ನು ಯಾರು ತಪ್ಪಿಸಬಾರದು. ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಸುತ್ತೋಲೆಗಳನ್ನು ಹೊರಡಿಸುತ್ತಾರೆ. ಇಂತಹ ತಪ್ಪುಗಳನ್ನು ಅಧಿಕಾರಿಗಳು ಮಾಡಲು ನಾನು ಬಿಡುವುದಿಲ್ಲ ಎಂದು ಭರವಸೆ ನೀಡಿದರು.

ಗೊಂದಲದ ವಿರುದ್ಧ ಧ್ವನಿ ಎತ್ತಬೇಕು: ಕೆಜಿಬಿ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕೆಲಸ ಮಾಡುತ್ತಿಲ್ಲ. ಅಧಿಕಾರಿಗಳು ಹೇಳಿದ್ದೆ ಕಾನೂನಾಗಿದೆ. ಡೋಂಗಿ ಪರಿಸರವಾದಿಗಳು ಇವರಿಗೆ ಇಲ್ಲದ ಕುಮ್ಮಕ್ಕು ನೀಡುತ್ತಿದ್ದಾರೆ. ಅಧಿಕಾರಿಗಳು ಹೇಳಿದ್ದೇ ಕಾನೂನು ಹೆಳೋದಾದ್ರೆ ನಾವುಗಳು ಯಾಕೆ ಇರುವುದು ಎಂದು ಪ್ರಶ್ನಿಸಿದ ಅವರು, ಕಸ್ತೂರಿ ರಂಗನ್ ವರದಿ ಕೂಡ ಜಿಲ್ಲೆಯಲ್ಲಿ ಇದೇ ರೀತಿಯಾಗಿದೆ ಎಂದರು ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ ಹೇಳಿದರು. ಕಸ್ತೂರಿ ರಂಗನ್ ವರದಿ ಸಂಬಂಧ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಂಠಿ ಸರ್ವೆ ಆಗಬೇಕು. ಆದರೆ, ಅಧಿಕಾರಿಗಳು ಮಾಡುತ್ತಿಲ್ಲ. ಜನರ ಮೇಲೆ ದೌರ್ಜನ್ಯ ಮಾತ್ರ ಎಸೆಗುತ್ತಿದ್ದಾರೆ. ಅಧಿಕಾರಿಗಳು ನೋಟಿಸ್ ಮೇಲೆ ನೋಟಿಸ್ ನೀಡುತ್ತಾರೆ. ಆದ್ದರಿಂದ ಗೊಂದಲದ ವಿರುದ್ಧ ನಾವು ಧ್ವನಿ ಎತ್ತಬೇಕು. ಇಲ್ಲದಿದ್ದಲ್ಲಿ ಮಕ್ಕಳ ಭವಿಷ್ಯ ಹಾಳಾಗುತ್ತದೆ. ಒಗ್ಗಟ್ಟಿದ್ದರೆ ಎಲ್ಲವನ್ನು ತಡೆಯಬಹುದು. ನೋಟಿಸ್‌ಗೆ ಹೆದರು ಅವಶ್ಯಕತೆಯಿಲ್ಲ. ನಮ್ಮ ಭೂಮಿ ಹಕ್ಕು ಎಂದರು.

ನಾಪಂಡ ರವಿ ಕಾಳಪ್ಪ, ಜಿಲ್ಲಾಧ್ಯಕ್ಷರು, ಬಿಜೆಪಿರೈತನ ಸಮಸ್ಯೆ ಬಂದಾಗ ಅಧಿಕಾರಿಗಳು ಚಿಂತನೆ ಮಾಡುತ್ತಿಲ್ಲ. ಸಿ ಆ್ಯಂಡ್ ಡಿ ಲ್ಯಾಂಡ್ ಅನ್ನು ಅರಣ್ಯ ಎಂದು ಘೋಷಿಸುವುದು ಅವೈಜ್ಞಾನಿಕ. ಪ್ರತಿಯೊಬ್ಬರು ಒಗ್ಗಟ್ಟಿನಿಂದ ಹೋರಾಟ ಮಾಡಬೇಕಾಗಿದೆ. ರೈತರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ.

ಕಸ್ತೂರಿ ರಂಗನ್ ವರದಿ, ಸಿ ಆ್ಯಂಡ್ ಡಿ ಲ್ಯಾಂಡ್‌ನಿಂದ ರೈತರು ಭಯಭೀತರಾಗಿದ್ದಾರೆ. ಎಲ್ಲರು ರಾಜಕೀಯ ರಹಿತವಾಗಿ ಹೋರಾಡಬೇಕು. ರೈತರಿಗೆ ಏನೇ ಸಂಕಷ್ಟ ಬಂದರು ಬೆಂಬಲಕ್ಕೆ ನಾವಿದ್ದೇವೆ. ಹೋರಾಟದ ಮೂಲಕ ಕೊಡಗಿನ ರೈತರನ್ನು ಉಳಿಸುವಂತಾಗಬೇಕು. ತೀತಿರ ಧರ್ಮಜ ಉತ್ತಪ್ಪ, ಜಿಲ್ಲಾಧ್ಯಕ್ಷರು, ಕಾಂಗ್ರೆಸ್

ರೈತರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ದಿಕ್ಕು ತೋಚದ ಹಿನ್ನೆಲೆ ರೈತರು ಒಂದಾಗಿದ್ದಾರೆ. ನೈಜ್ಯ ಹೋರಾಟದ ಮೆಟ್ಟಿಲು ಇದಾಗಿದೆ. ಸಿ ಆ್ಯಂಡ್ ಡಿ, ಸೆಕ್ಷನ್ ೪ ಕುರಿತು ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿಯವರ ಗಮನ ಸೆಳೆಯಲಾಗುವುದು. ಸಿ.ಎಲ್.ವಿಶ್ವ, ಜಿಲ್ಲಾಧ್ಯಕ್ಷರು, ಜೆಡಿಎಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net