ಮೈಸೂರಿನಲ್ಲಿ ಸಾಮೂಹಿಕ ಯೋಗ ಪ್ರದರ್ಶನ

Yoga
Published on

ಮೈಸೂರು: ನಗರದ ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವತಿಯಿಂದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಶನಿವಾರ ಯೋಗ ದಿನಾಚರಣೆ ಅಂಗವಾಗಿ ಯೋಗ ಪ್ರದರ್ಶನ ಹಾಗೂ ಯೋಗಥಾನ್ ಹಮ್ಮಿಕೊಳ್ಳ ಲಾಗಿತ್ತು. ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸಾಮೂಹಿಕ ಯೋಗ ಪ್ರದರ್ಶನ ನೀಡಿದರು.

ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಪ್ರತಿಯೊಬ್ಬರು ಯೋಗವನ್ನು ಅಭ್ಯಾಸ ಮಾಡಿದರೆ ಹಣ ಖರ್ಚು ಮಾಡದೆ ಆರೋಗ್ಯ ಕಾಪಾಡಿಕೊಳ್ಳಬಹುದು. ಪ್ರತಿಯೊಬ್ಬರು ಪ್ರತಿನಿತ್ಯ ಯೋಗಕೋಸ್ಕರ ಒಂದು ಗಂಟೆ ಮೀಸಲಿಟ್ಟರೆ ಆರೋಗ್ಯ ವೃದ್ಧಿಸಿಕೊಳ್ಳಬಹುದು. ಇದರಿಂದ ಆಸ್ಪತ್ರೆಗೆ ಹೋಗುವುದನ್ನು ತಪ್ಪಿಸಬಹುದು ಎಂದರು.

ಪ್ರಕೃತಿಗೆ ಪರ್ಯಾಯ ಇಲ್ಲ. ಹಾಗಾಗಿ ನಾವೆಲ್ಲರು ಪ್ರಕೃತಿಯೊಂದಿಗೆ ಹೊಂದಿಕೊಂಡು ಬದುಕು ನಡೆಸಬೇಕು. ಪ್ರಕೃತಿಯನ್ನು ಚೆನ್ನಾಗಿಟ್ಟರೆ ನಾವು ಸಹ ಚೆನ್ನಾಗಿರುತ್ತೇವೆ. ಪ್ರಕೃತಿಯ ಮಾದರಿಯಲ್ಲಿ ರಕ್ತಕ್ಕೂ ಪರ್ಯಾಯ ಇಲ್ಲ. ಅದೇ ರೀತಿ ಯೋಗಕ್ಕೂ ಪರ್ಯಾಯ ಇಲ್ಲ. ಪರಿಸರ ದಿನ, ರಕ್ತದಾನಿಗಳ ದಿನ ಹಾಗೂ ಯೋಗ ದಿನ ಜೂನ್ ತಿಂಗಳಿನಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ ಎಂದು ಹೇಳಿದರು.

ಯೋಗ ಪ್ರದರ್ಶನ ಮತ್ತು ಯೋಗಥಾನ್‌ಗೆ ಚಾಲನೆ ನೀಡಿದ ಮೇಯರ್ ಶಿವಕುಮಾರ್ ಮಾತನಾಡಿ, ಮೈಸೂರು ಪ್ರಸ್ತುತ ಯೋಗ ನಗರಿಯಾಗಿ ಗುರುತಿಸಿಕೊಳ್ಳಲು ಮೈಸೂರಿನ ಅರಸರು ಕಾರಣಕರ್ತರು. ನಗರದಲ್ಲಿ ಯೋಗ ಬೆಳವಣಿಗೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.

ಸಭಾ ಕಾರ್ಯಕ್ರಮದ ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು. ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಉಪ ಮೇಯರ್ ಡಾ.ಜಿ. ರೂಪಾ, ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರಾಚಾರ್ಯ ಡಾ. ಗಜಾನನ ಹೆಗ್ಡೆ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net