

ಬೆಂಗಳೂರು: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ನಿಶ್ಚಿತಾರ್ಥವಾದ ಹುಡುಗ ಜತೆಯಲ್ಲೇ ಆ ಯುವತಿಯ ಮದುವೆ ಆಗುತ್ತಿತ್ತು. ಆದರೆ, ಆಕೆಯ ಮಾಜಿ ಪ್ರಿಯಕರ ಮಾಡಿದ ಯಡವಟ್ಟಿಗೆ ಮದ್ವೆಯೇ ಮುರಿದುಬಿದ್ದಿದ್ದು, ನೊಂದ ಯುವತಿ ಮಾಜಿ ಪ್ರಿಯಕರನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಸುಬ್ರಹ್ಮಣ್ಯಪುರದ ನಿವಾಸಿ 23 ವರ್ಷದ ಯುವತಿ ಕೊಟ್ಟ ದೂರಿನ ಆಧಾರದ ಮೇರೆಗೆ ದಿಲೀಪ್ ಕುಮಾರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೆಲ ವರ್ಷಗಳ ಹಿಂದೆ ದೂರುದಾರ ಯುವತಿ ಹಾಗೂ ದಿಲೀಪ್ ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದರು. ಆ ವೇಳೆ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಯುವತಿಯ ಗಮನಕ್ಕೆ ಬಾರದಂತೆ ದಿಲೀಪ್ ಮೊಬೈಲ್ನಲ್ಲಿ ಆಕೆಯ ಖಾಸಗಿ ಫೋಟೋಗಳನ್ನು ಸೆರೆಹಿಡಿದಿದ್ದ. ನಂತರ ಇಬ್ಬರೂ ದೂರವಾಗಿದ್ದರು.
ಇತ್ತೀಚೆಗೆ ಆ ಫೋಟೋಗಳನ್ನು ಯುವತಿಗೆ ತೋರಿಸಿ, "ನನ್ನನ್ನು ವಿವಾಹವಾಗದಿದ್ದರೆ, ಈ ಫೋಟೋಗಳನ್ನು ಜಾಲತಾಣಗಳಲ್ಲಿ ಹಾಕುತ್ತೇನೆ'' ಎಂದು ಬೆದರಿಸಿದ್ದ. ಆತನನ್ನು ವಿವಾಹವಾಗಲು ಯುವತಿ ಒಪ್ಪಿರಲಿಲ್ಲ. ಕೆಲ ದಿನಗಳ ಹಿಂದೆ ಯುವತಿಗೆ ಬೇರೊಬ್ಬ ಯುವಕನ ಜತೆಗೆ ವಿವಾಹ ನಿಶ್ಚಿತಾರ್ಥವಾಗಿತ್ತು. ನಿಶ್ಚಿತಾರ್ಥ ಮಾಡಿಕೊಂಡಿದ್ದ ವರನ ಕುಟುಂಬದವರಿಗೆ ಡಿ.8ರಂದು ಯುವತಿಯ ಖಾಸಗಿ ಫೋಟೋಗಳನ್ನು ದಿಲೀಪ್ ಕಳುಹಿಸಿದ್ದ. ಇದರಿಂದ ಯುವತಿಗೆ ನಿಶ್ಚಯವಾಗಿದ್ದ ಮದುವೆ ರದ್ದಾಗಿದೆ ಎಂದು ತಿಳಿದು ಬಂದಿದೆ. ಯುವತಿಯ ಖಾಸಗಿ ಫೋಟೋಗಳನ್ನು ಆಕೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದ ಹುಡುಗನ ಕುಟುಂಬಕ್ಕೆ ಕಳುಹಿಸಿದ ಮಾಜಿ ಪ್ರಿಯಕರನ ವಿರುದ್ಧ ದಕ್ಷಿಣ ಸಿಇಎನ್ ಕ್ರೈಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.