ಚಕ್ಕುಲಿ, ಕುರ್​ಕುರೆ ಪ್ಯಾಕ್​ನಲ್ಲಿ ಗಾಂಜಾ! ಬೆಂಗಳೂರು ಸಿಸಿಬಿ ಪೊಲೀಸರ ಬಲೆಗೆ ಸಿಕ್ಕಿಬಿದ್ದ ಚಾಲಾಕಿ ಪೆಡ್ಲರ್​

ganja case
Published on

ಬೆಂಗಳೂರು: ಚಕ್ಕುಲಿ, ಕುರ್​ಕುರೆ ಇನ್ನಿತರ ತಿನಿಸುಗಳ ಪೊಟ್ಟಣಗಳಲ್ಲಿ ಗಾಂಜಾ ತುಂಬಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ಚಾಲಾಕಿ ಪೆಡ್ಲರ್​ನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮೈಕೋ ಲೇಔಟ್​ ಸಮೀಪದ ನಿವಾಸಿ ಗೋಳಕ್​ ಬೆಹೇರಾ ಬಂಧಿತ. 8 ಲಕ್ಷ ರೂ. ಮೌಲ್ಯದ ಗಾಂಜಾ ಮತ್ತು 60 ಸಾವಿರ ರೂ. ಜಪ್ತಿ ಮಾಡಲಾಗಿದೆ. ಒಡಿಶಾ ಮೂಲದ ಗೋಳಕ್​, ಕಳೆದ 8 ವರ್ಷಗಳಿಂದ ನಗರದಲ್ಲಿ ನೆಲೆಸಿದ್ದ. ತನ್ನೂರಿನಲ್ಲಿ ಕಡಿಮೆ ಬೆಲೆಗೆ ಸಿಗುತ್ತಿದ್ದ ಗಾಂಜಾವನ್ನು ತಂದು ಬೆಂಗಳೂರಲ್ಲಿ ಮಾರಾಟ ಮಾಡುತ್ತಿದ್ದ. ಯಾರಿಗೂ ಅನುಮಾನ ಬಾರದಿರಲೆಂದು ಚಕ್ಕುಲಿ, ಕುರ್​ಕುರೆ ಇನ್ನಿತ್ತರ ತಿನಿಸುಗಳ ಪೊಟ್ಟಣಗಳಲ್ಲಿ ಗಾಂಜಾ ತುಂಬಿ ಗ್ರಾಹಕರಿಗೆ ಪೂರೈಸುತ್ತಿದ್ದ.

ಬೆಂಗಳೂರಲ್ಲಿ ನೆಲೆಸಿರುವ ಒಡಿಶಾ ಮೂಲದ ಕಾರ್ಮಿಕರನ್ನು ಗುರಿಯಾಗಿಸಿಕೊಂಡು 5 ಗ್ರಾಂ ಗಾಂಜಾವನ್ನು 500 ರೂ.ಗೆ ಮಾರುತ್ತಿದ್ದ. ಈ ದಂಧೆಗೆ ವಿವಿಧ ಕಂಪನಿಗಳ ಖಾದ್ಯ ತಿನಿಸುಗಳ ಕವರ್​ಗಳನ್ನು ಸಂಗ್ರಹಿಸುತ್ತಿದ್ದ. ಅವುಗಳಲ್ಲಿ ಗಾಂಜಾ ತುಂಬಿ ಸೆಲ್ಲೊ ಟೆಪ್​ ಹಾಕಿ ಪ್ಯಾಕ್​ ಮಾಡಿದ ನಂತರ ಒಡಿಶಾದಿಂದ ನಗರಕ್ಕೆ ರೈಲಿನಲ್ಲಿ ಸಾಗಿಸುತ್ತಿದ್ದ. ಮೇಲ್ನೋಟಕ್ಕೆ ಖಾದ್ಯ ಪೊಟ್ಟಣಗಳಂತೆ ಕಾಣುತ್ತಿದ್ದರಿಂದ ರೈಲಿನ ಪಯಣದ ವೇಳೆ ಪೊಲೀಸರನ್ನು ಸಹ ಆರೋಪಿ ಸುಲಭವಾಗಿ ಕಣ್ತಪ್ಪಿಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net