

ಮಂಗಳೂರು: ಇಂಟರ್ನ್ಶಿಪ್ ವಿದ್ಯಾರ್ಥಿನಿಗೆ ಹಿರಿಯ ವಕೀಲ ಕೆ.ಎಸ್.ಎನ್. ರಾಜೇಶ್ ಭಟ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಪ್ರಕರಣದ ತನಿಖೆಯನ್ನು ಸಮರ್ಪಕವಾಗಿ ನಿರ್ವಹಿಸದ ಆರೋಪದಡಿ ಉರ್ವ ಪೊಲೀಸ್ ಠಾಣೆ ಪಿಎಸ್ಐ ಶ್ರೀಕಲಾ ಮತ್ತು ಮುಖ್ಯಪೇದೆ ಪ್ರಮೋದ್ ಅವರನ್ನು ಅಮಾನತು ಮಾಡಲಾಗಿದೆ.
ತನ್ನ ಕಚೇರಿಗೆ ತರಬೇತಿಗೆಂದು ಬರುತ್ತಿದ್ದ ಕಾನೂನು ಪದವಿ ವಿದ್ಯಾರ್ಥಿನಿಯೊಬ್ಬರಿಗೆ ಮಂಗಳೂರಿನ ಪ್ರತಿಷ್ಠಿತ ವಕೀಲ ರಾಜೇಶ್ ಭಟ್ ಲೈಗಿಂಕ ಕಿರುಕುಳ ನೀಡಿದ್ದಾರೆ ಎಂಬ ದೂರು ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಉತ್ತರ ಪ್ರದೇಶ ಮೂಲದ ವಿದ್ಯಾರ್ಥಿನಿ ಇತ್ತೀಚಿಗೆ ದೂರು ದಾಖಲಿಸಿದ್ದರು. ಗಂಭೀರ ಪ್ರಕರಣವನ್ನು ಲಘುವಾಗಿ ಪರಿಗಣಿಸಿ ಮಾತುಕತೆಯಲ್ಲಿ ಮುಗಿಸಲು ಪಿಎಸ್ಐ ಶ್ರೀಕಲಾ ಯತ್ನಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ದೂರು ಬಂದ ಕೂಡಲೇ ಪ್ರಕರಣ ದಾಖಲು ಮಾಡದೆ ಹಾಗೂ ಮೇಲಧಿಕಾರಿಗಳ ಗಮನಕ್ಕೆ ತಾರದೆ ನಿರ್ಲಕ್ಷ್ಯ ವಹಿಸಿದ್ದರು ಎನ್ನಲಾಗಿದೆ. ಈ ಆರೋಪದ ಮೇರೆಗೆ ಪಿಎಸ್ಐ ಶ್ರೀಕಲಾ ಮತ್ತು ಪ್ರಮೋದ್ ಅವರನ್ನ ಅಮಾನತುಗೊಳಿಸಿ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.