ವಿವಿ ಗ್ರೂಪ್‌ಗೆ ಅಶ್ಲೀಲ ವಿಡಿಯೋ ಹಾಕಿದ ಪ್ರಾಧ್ಯಾಪಕ! ಸಿಬ್ಬಂದಿ ಶಾಕ್​

porn
Published on

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಪದವಿ ಪ್ರಾಧ್ಯಾಪಕರನ್ನೊಳಗೊಂಡ ಅಧಿಕೃತ ಟೆಲಿಗ್ರಾಂ ಗ್ರೂಪ್‌ಗೆ ಪ್ರಾಧ್ಯಾಪಕರೊಬ್ಬರು ಅಶ್ಲೀಲ ವಿಡಿಯೋ ಅಪ್‌ಲೋಡ್ ಮಾಡಿರುವ ಪ್ರಕರಣವನ್ನು ವಿವಿ ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ಸೈಬರ್ ತಜ್ಞರ ಮೂಲಕ ತನಿಖೆಗೆ ಮುಂದಾಗಿದೆ.

ಕೊಡಗು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಪದವಿ ಕಾಲೇಜುಗಳ 1 ಸಾವಿರಕ್ಕೂ ಅಧಿಕ ಮಂದಿ ಈ ಟೆಲಿಗ್ರಾಂ ಗ್ರೂಪ್‌ನಲ್ಲಿ ಸದಸ್ಯರಾಗಿದ್ದಾರೆ. ಪರೀಕ್ಷೆಗಳ ಹಾಗೂ ಇತರ ಮಾಹಿತಿ ನೀಡಲು ವಿಶ್ವವಿದ್ಯಾಲಯದಿಂದಲೇ ಅಧಿಕೃತವಾಗಿ ಈ ಗ್ರೂಪ್ ರಚಿಸಲಾಗಿತ್ತು. ಬುಧವಾರ ಮಧ್ಯಾಹ್ನ ಕೊಡಗು ಜಿಲ್ಲೆಯ ಆಂಗ್ಲಭಾಷೆ ಪ್ರಾಧ್ಯಾಪಕರೊಬ್ಬರು ಅಶ್ಲೀಲ ವಿಡಿಯೋವನ್ನು ಗ್ರೂಪ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಇದಕ್ಕೆ ಇತರ ಪ್ರಾಧ್ಯಾಪಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ವಿಶ್ವವಿದ್ಯಾಲಯ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ಸಂಬಂಧಪಟ್ಟ ಪ್ರಾಧ್ಯಾಪಕರಿಗೆ ಸ್ಪಷ್ಟನೆ ಕೇಳಿ ನೋಟಿಸ್ ಜಾರಿ ಮಾಡಿದೆ. ಆಕಸ್ಮಿಕವಾಗಿ ವಿಡಿಯೋ ಬಂದಿದೆಯೋ ಅಥವಾ ಉದ್ದೇಶಪೂರ್ವಕವಾಗಿ ಹಾಕಿದ್ದಾರೆಯೇ ಎಂಬುದನ್ನು ತನಿಖೆ ಮಾಡಬೇಕಿದೆ. ಸೈಬರ್ ತಜ್ಞರ ವರದಿ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ವಿವಿ ಕುಲಸಚಿವ (ಪರೀಕ್ಷಾಂಗ) ಪ್ರೊ.ಪಿ.ಎಲ್.ಧರ್ಮ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net