ಧಾರಾಕಾರ ಮಳೆ, ಕೆಆರ್​ಎಸ್ ಡ್ಯಾಂಗೆ ಒಳಹರಿವು ಹೆಚ್ಚಳ: ನದಿಪಾತ್ರದ ಜನರಿಗೆ ಎಚ್ಚರಿಕೆ

krs dam
Published on

ಕೆ.ಆರ್​.ಸಾಗರ: ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಕೆ.ಆರ್​.ಎಸ್​. ಡ್ಯಾಂಗೆ ಒಳಹರಿವು ಹೆಚ್ಚಾಗಿದ್ದು, ಯಾವ ಸಮಯದಲ್ಲಾದರೂ ಅಣೆಕಟ್ಟೆಯಿಂದ ನೀರು ಹೊರ ಬಿಡುವ ಸಾಧ್ಯತೆ ಇರುವುದರಿಂದ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಕೃಷ್ಣರಾಜಸಾಗರ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಬುಧವಾರ ಮಧ್ಯಾಹ್ನಕ್ಕೆ 115.70 ಅಡಿ ತಲುಪಿದೆ.

ಒಳಹರಿವು 30,923 ಕ್ಯೂಸೆಕ್​ ಇದ್ದು, ಎರಡು ದಿನಗಳಲ್ಲಿ ಅಣೆಕಟ್ಟೆಗೆ 6 ಅಡಿ ನೀರು ಹರಿದು ಬಂದಿದೆ. ಕಾವೇರಿ ಕಣಿವೆಯಲ್ಲಿ ಹಲವು ದಿನಗಳಿಂದ ಉತ್ತಮ ಮಳೆ ಆಗುತ್ತಿರುವುದು ಮತ್ತು ಹಾರಂಗಿ ಜಲಾಶಯದಿಂದ ಹೊರಹರಿವು ಹೆಚ್ಚಾಗಿರುವುದರಿಂದ ಅಣೆಕಟ್ಟೆಗೆ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 20 ಅಡಿ ನೀರು ಹೆಚ್ಚು ಸಂಗ್ರಹವಾಗಿದೆ.

124.80 ಗರಿಷ್ಠ ಮಟ್ಟವಿರುವ ಅಣೆಕಟ್ಟೆ ತುಂಬಲು 13 ಅಡಿ ಬಾಕಿ ಇದೆ. ಪ್ರಸ್ತುತ ಅಣೆಕಟ್ಟೆಯಲ್ಲಿ 115.50 ಅಡಿ ನೀರಿದ್ದು, ಒಳಹರಿವು 30,923 ಕ್ಯೂಸೆಕ್​, ಹೊರಹರಿವು 3575 ಕ್ಯೂಸೆಕ್​ ಇದೆ. 37.855 (ಗರಿಷ್ಠ 49.454) ಟಿಎಂಸಿ ನೀರು ಸಂಗ್ರಹವಿದೆ. 2021ರಲ್ಲಿ 91.42 ಅಡಿ ನೀರಿತ್ತು. ಒಳಹರಿವು 1161 ಕ್ಯೂಸೆಕ್​, ಹೊರ ಹರಿವು 4653 ಕ್ಯೂಸೆಕ್​ ಇತ್ತು.

ನದಿ ಪಾತ್ರದ ಜನರಿಗೆ ಎಚ್ಚರಿಕೆ: ಕೆ.ಆರ್​.ಸಾಗರ ಅಣೆಕಟ್ಟೆಗೆ ಹೆಚ್ಚಿನ ನೀರು ಹರಿದುಬರುತ್ತಿದ್ದು, ಯಾವ ಸಮಯದಲ್ಲಾದರೂ ಅಣೆಕಟ್ಟೆಯಿಂದ ನೀರು ಹೊರ ಬಿಡುವ ಸಾಧ್ಯತೆ ಇದೆ. ಹಾಗಾಗಿ ನದಿ ಪಾತ್ರದ ಜನರು ತಮ್ಮ ಆಸ್ತಿ, ಪಾಸ್ತಿ ಜಾನುವಾರು ರಕ್ಷಣೆ ಮಾಡಿಕೊಳ್ಳಲು ಮುನ್ನೆಚ್ಚರಿಕೆ ವಹಿಸಬೇಕು ಹಾಗೂ ನದಿಗೆ ಯಾರು ಇಳಿಯಬಾರದು ಎಂದು ಕೆ.ಆರ್​.ಸಾಗರ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ರಾಮಮೂರ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net