

ಮಂಡ್ಯ: ತಾಲೂಕಿನ ಕ್ಯಾಂತುಗೆರೆ ಗ್ರಾಮದಲ್ಲಿ ಬಂಡೂರು ತಳಿಯ ಜೋಡಿ ಕುರಿಗಳು ಬರೋಬ್ಬರಿ 1.05 ಲಕ್ಷ ರೂಪಾಯಿಗೆ ಮಾರಾಟವಾಗುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿವೆ.
ಗ್ರಾಮದ ರೈತ ಶರತ್ ಎಂಬುವರು ಒಂದೂವರೆ ವರ್ಷದಿಂದ ಈ ಕುರಿಗಳನ್ನು ಸಾಕಿದ್ದರು. ಮರಿ ಆಗಿದ್ದಾಗಲೇ ತಂದು ಉತ್ತಮ ಆಹಾರ ಕೊಟ್ಟು ನೋಡಿಕೊಳ್ಳುತ್ತಿದ್ದರು. ಮಂಡ್ಯ ನಗರದ ಮುಬಾರಕ್ ಬಾಬು ಎಂಬುವರು ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ದುಬಾರಿ ಬೆಲೆ ಕೊಟ್ಟು ಕುರಿಗಳನ್ನು ಖರೀದಿಸಿದ್ದಾರೆ. ಜೂ.24ರಂದು ಕುರಿಗಳ ಮಾಲೀಕರಿಗೆ 1.05 ಲಕ್ಷ ರೂ. ಕೊಟ್ಟು ಅಭಿನಂದಿಸಿದ್ದಾರೆ.
ಕಳೆದ ವರ್ಷ ತಾಲೂಕಿನ ಸೂನಗನಹಳ್ಳಿ ಗ್ರಾಮದಲ್ಲಿ ಬಂಡೂರು ತಳಿಯ ಎರಡು ಕುರಿಗಳು ಬರೋಬ್ಬರಿ 1.25 ಲಕ್ಷ ರೂಪಾಯಿಗೆ ಮಾರಾಟವಾಗಿದ್ದವು. ಒಟ್ಟಾರೆ ಬಂಡೂರು ತಳಿ ಕುರಿಗಳಿಗೆ ಎಲ್ಲಿಲ್ಲದ ಬೇಡಿಕೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.